ಬೆಳ್ತಂಗಡಿ: ಏಪ್ರಿಲ್ 26ರಂದು ನಡೆಯುತ್ತಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬೆಳಿಗ್ಗೆ 7 ಗಂಟೆಗೆ ಚಾಲನೆ ದೊರೆತಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 241 ಮತಗಟ್ಟೆಗಳಲ್ಲಿಯೂ ಮತದಾನ ನಿಗದಿತ ಸಮಯಕ್ಕೆ ಆರಂಭಗೊಂಡಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆಗೆ ಸಿದ್ಧರಾಗಿದ್ದಾರೆ.ನ್ಯಾಯ ಸಮ್ಮತವಾಗಿ ಮತ್ತು ಪಾರದರ್ಶಕವಾಗಿ ಮತದಾನ ನಡೆಸಲು ಸಕಲ ಸಿದ್ಧತೆ ಪೂರ್ಣಗೊಳಿಸಿರುವ ಚುನಾವಣಾ ಆಯೋಗ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ವ್ಯಾಪಕ ಮುನ್ನೆಚ್ಚರಿಕೆ ವಹಿಸಿದೆ.ಈಗಾಗಲೇ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ನಕ್ಸಲ್ ಪೀಡಿತ 25 ಮತಗಟ್ಟೆಗಳಲ್ಲಿಯೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು ಬಾರ್, ವೈನ್‌ಶಾಪ್ ಸಹಿತ ಎಲ್ಲಾ ಮಾದರಿಯ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಸಂಜೆ ೬ರವರೆಗೆ ಮತದಾನ ನಡೆಯಲಿದೆ.
ಬೆಳ್ತಂಗಡಿಯಲ್ಲಿ 232817 ಮತದಾರರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,17,603 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 115331 ಪುರುಷರು, 117485 ಮಹಿಳೆಯರು ಮತ್ತು ಓರ್ವ ಇತರ ಸೇರಿದಂತೆ ಒಟ್ಟು 232817 ಮತದಾರರು ಇದ್ದಾರೆ. ಪ್ರತಿ ಮತಗಟ್ಟೆಗಳಲ್ಲಿ ಅಧ್ಯಕ್ಷ ಅಧಿಕಾರಿ-1, ಸಹಾಯಕ ಅಧ್ಯಕ್ಷ ಅಧಿಕಾರಿ-1, ಮತದಾನ ಅಧಿಕಾರಿ-2, ಡಿ ಗ್ರೂಪ್-1, ಆಶಾ ಕಾರ್ಯಕರ್ತೆ-1, ಪೊಲೀಸ್-1 ಸೇರಿದಂತೆ ಒಟ್ಟು 7 ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತಗಟ್ಟೆಯ ಒಳಗಡೆ ಅಧ್ಯಕ್ಷ ಅಧಿಕಾರಿ ಮತಗಟ್ಟೆಯ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತಿದ್ದಾರೆ. ಸಹಾಯಕ ಅಧ್ಯಕ್ಷ ಅಧಿಕಾರಿ ಮತದಾರರ ಪಟ್ಟಿ ಪರಿಶೀಲನೆ ನಡೆಸುತ್ತಿದ್ದು ಮತದಾನ ಅಧಿಕಾರಿ ಎಡ ಗೈ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡನೇ ಮತದಾನ ಅಧಿಕಾರಿ ಬ್ಯಾಲೆಟ್ ಕೌಂಟಿಂಗ್, ಡಿ ಗ್ರೂಪ್ ನೌಕರ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಬೂತ್‌ಗಳಲ್ಲಿ ಓರ್ವ ಪೊಲೀಸ್ ಸಿಬ್ಬಂದಿ, ಕ್ರಿಟಿಕಲ್ ಮತಗಟ್ಟೆಗಳಲ್ಲಿ ಹೆಚ್ಚವರಿ ಪೊಲೀಸ್ ಸಿಬ್ಬಂದಿ ಹಾಗೂ ಮೈಕ್ರೋ ಒಬ್ಸರ್ವರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಗಮ ಮತದಾನವಾಗುವುದನ್ನು ಖಾತ್ರಿ ಪಡಿಸಲು ನೋಡೆಲ್ ಅಧಿಕಾರಿಗಳ ತಂಡ ಮತ್ತ ಸರ್ವೆಲೆನ್ಸ್ ಟೀಮ್ ಕಾರ್ಯ ನಿರ್ವಹಿಸುತ್ತಿದೆ.
ಸಂಜೆ ಡಿ ಮಸ್ಟರಿಂಗ್: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಏ.೨೫ರಂದು ಮಸ್ಟರಿಂಗ್ ನಡೆದಿದೆ. ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗಳು ಉಜಿರೆ ಎಸ್‌ಡಿಎಂನಿಂದ ಎ.25ರಂದು ಹೊರಟು ತಮಗೆ ನಿಗದಿ ಪಡಿಸಲಾಗಿರುವ ಮತದಾನ ಕೇಂದ್ರಗಳಿಗೆ ತಲುಪಿದ್ದಾರೆ. ಎ.26ರಂದು ಮತದಾನ ಮುಗಿದ ಬಳಿಕ ಮತದಾನ ಕೇಂದ್ರಗಳಿಂದ ಎಸ್‌ಡಿಎಂ ಕಾಲೇಜಿಗೆ ಆಗಮಿಸಿ ಡಿ ಮಸ್ಟರಿಂಗ್ ನಡೆಯಲಿದೆ. ನಂತರ ಬಿಗಿ ಬಂದೋಬಸ್ತಲ್ಲಿ ಮಂಗಳೂರು ಸುರತ್ಕಲ್ ಎನ್‌ಐಟಿಕೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡೊಯ್ಯಲಾಗುವುದು. ಜೂನ್ 4ರಂದು ಎನ್‌ಐಟಿಕೆಯಲ್ಲಿ ಮತ ಎಣಿಕೆ ನಡೆಯಲಿದೆ.
ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತದಾರರ ಕೈಯಲ್ಲಿ: ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿರುವ ೯ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ತೀರ್ಮಾನಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಮಂಗಳೂರು ಕಾರ್ ಸ್ಟ್ರೀಟ್ ಮಹಾಮಾಯ ದೇವಳ ರಸ್ತೆ ಬಳಿಯ ನಿವಾಸಿ ಸೇಸಣ್ಣ ಚೌಟರ ಮಗ ಕ್ಯಾ|ಬ್ರಿಜೇಶ್ ಚೌಟ(42ವ.), ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಂಕನಾಡಿ ಮಹಾಲಿಂಗೇಶ್ವರ ಟೆಂಪಲ್ ರಸ್ತೆಯಲ್ಲಿನ ಕಪಿತಾನಿಯೋ ಶಾಲಾ ಬಳಿಯ ಹೆಚ್.ಎಂ.ರಾಮಯ್ಯ ಅವರ ಮಗ ಆರ್.ಪದ್ಮರಾಜ್(53ವ.), ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಮಂಗಳೂರು ಪಡುಬೆಟ್ಟು ಕೊಟ್ಟಾರ ಅಶೋಕ್‌ನಗರ ಶಂಬು ಅವರ ಮಗ ಕಾಂತಪ್ಪ ಅಲಂಗಾರ್(63ವ.), ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಬಂಟ್ವಾಳ ಅಳಿಕೆ ಮಡಿಯಾಳ ಕೆ.ಎಸ್.ಈಶ್ವರಯ್ಯ ಅವರ ಮಗ ಕೆ.ಇ. ಮನೋಹರ(47ವ.), ಕರ್ನಾಟಕ ರಾಷ್ಟç ಸಮಿತಿ ಅಭ್ಯರ್ಥಿ ಸುಳ್ಯ ನೆಲ್ಲೂರು ಕೆಮ್ರಾಜೆ ಮೊಟ್ಟೆಮನೆಯ ದಿ.ಶಿವಪ್ಪ ಗೌಡ ಎಂ.ರವರ ಮಗಳು ರಂಜಿನಿ ಎಂ(39ವ.), ಕರುನಾಡ ಸೇವಕರ ಪಾರ್ಟಿ ಅಭ್ಯರ್ಥಿ ಮಂಗಳೂರು ಕೆಂಜಾರು ಕುಪ್ಪ ಸ್ವಾಮಿಯವರ ಮಗ ದುರ್ಗಾಪ್ರಸಾದ್(33ವ.), ಪಕ್ಷೇತರ ಅಭ್ಯರ್ಥಿಗಳಾಗಿರುವ ಬಜ್ಪೆ ಮುರನಗರ ಕೋಳಂಬೆ ಪರಂಗಿಪಳ್ಳ ವೈಟ್‌ಹೌಸ್‌ನ ದಿ.ವಿಕ್ಟರ್ ಪಿಂಟೋ ಅವರ ಮಗ ಮ್ಯಾಕ್ಸಿಂ ಪಿಂಟೋ(59ವ.), ಉಳ್ಳಾಲ ಪೆರ್ಮನ್ನೂರು ಹೊಸಗದ್ದೆ ಗೇಬ್ರಿಯಲ್ ಕುವೆಲ್ಲೋ ಅವರ ಮಗ ದೀಪಕ್ ರಾಜೇಶ್ ಕುವೆಲ್ಲೋ(48ವ) ಮತ್ತು ಮಂಗಳೂರು ಕಾವೂರು ರವೀಂದ್ರನಾಥ ಪೂಜಾರಿಯವರ ಮಗ ಸುಪ್ರೀತ್ ಕುಮಾರ್ ಪೂಜಾರಿ(47ವ.) ಅವರ ರಾಜಕೀಯ ಭವಿಷ್ಯ ಮತದಾರರ ಕೈಯಲ್ಲಿದೆ.