Site icon Suddi Belthangady

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ವಿಜ್ಞಾನ ಸಿಂಚನ’ ಅಂತರ್ ಕಾಲೇಜು ವಿಜ್ಞಾನ ಸ್ಪರ್ಧೆ- ವಿದ್ಯಾರ್ಥಿಗಳು ಪ್ರಾಬ್ಲೆಮ್ ಸಾಲ್ವಿಂಗ್ ಮನಃಸ್ಥಿತಿ ಬೆಳೆಸಿಕೊಳ್ಳಿ: ಪೂರನ್ ವರ್ಮ

ಉಜಿರೆ: ವಿದ್ಯಾರ್ಥಿಗಳು ಸಮಸ್ಯೆ ಪರಿಹರಿಸುವ (ಪ್ರಾಬ್ಲೆಮ್ ಸಾಲ್ವಿಂಗ್) ಮನಃಸ್ಥಿತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಬೇಕು. ಹಾಗಾದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮ ಹೇಳಿದರು.

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇಂದು (ಎ.24) ಆಯೋಜಿಸಿದ್ದ ‘ವಿಜ್ಞಾನ ಸಿಂಚನ’ ಅಂತರ್ ಕಾಲೇಜು ವಿಜ್ಞಾನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

“ಜಗತ್ತಿನಲ್ಲಿ ಮೂರು ವಿಧದ ಜನರಿದ್ದಾರೆ. ಮೊದಲನೆಯವರು ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಸಮಸ್ಯೆಗಳಿಗೆ ಹೊಂದಿಕೊಳ್ಳುತ್ತಾರೆ ಮತ್ತು ತಮ್ಮ ಸಮಸ್ಯೆಯೊಂದಿಗೆ ಬದುಕಲು ಪ್ರಾರಂಭಿಸುತ್ತಾರೆ. ಎರಡನೇ ಗುಂಪಿನ ಜನರು ಸಮಸ್ಯೆಯನ್ನು ಗುರುತಿಸಿ ಅದರ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ. ಮೂರನೇ ಗುಂಪಿನ ಜನರು ಸಮಸ್ಯೆಯನ್ನು ಕಂಡುಕೊಂಡಾಗ ಅದನ್ನು ಪರಿಹರಿಸಲು ಪ್ರಾರಂಭಿಸುತ್ತಾರೆ. ಈ ಮೂರನೇ ಗುಂಪಿನ ಜನರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ನೀವೂ ಕೂಡ ಸಮಸ್ಯೆಯನ್ನು ಪರಿಹರಿಸುವ ಮನಃಸ್ಥಿತಿಯನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗುತ್ತೀರಿ” ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಉಪಪ್ರಾಂಶುಪಾಲ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್. ಎನ್. ಕಾಕತ್ಕರ್, ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ ಕೆ. ಪಿ., ವಿದ್ಯಾರ್ಥಿ ಸಂಯೋಜಕ ಕಿರಣ್ ಉಪಸ್ಥಿತರಿದ್ದರು.

ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ರಾವ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ನಮ್ರತಾ ಜೈನ್ ವಂದಿಸಿದರು. ವಿದ್ಯಾರ್ಥಿನಿ ರುಚಿತಾ ಕಾರ್ಯಕ್ರಮ ನಿರೂಪಿಸಿದರು.

9 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳಿಂದ 90ಕ್ಕೂ ಅಧಿಕ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಲೇಜಿನ ಕಾರಿಡಾರ್’ನಲ್ಲಿ ಅರಣ್ಯ ಮಾದರಿಯಲ್ಲಿ ಅಲಂಕಾರ ಮಾಡಲಾಗಿತ್ತು.

Exit mobile version