Site icon Suddi Belthangady

ಎ.22: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಶ್ರೀ ಮನ್ಮಹಾರಥೋತ್ಸವ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕ್ರೋಧಿ ಸಂವತ್ಸರದ ಮೇಷ ಸಂಕ್ರಮಣ ಎ.13ರಂದು ಧ್ವಜಾರೋಹಣದಿಂದ ಮೊದಲ್ಗೊಂಡ ವಾರ್ಷಿಕ ವಿಷು ಜಾತ್ರಾ ಮಹೋತ್ಸವದಲ್ಲಿ ಎ.22ರಂದು ಸೋಮವಾರ ಶ್ರೀ ಮಂಜುನಾಥ ಸ್ವಾಮಿಯ ಶ್ರೀ ಮನ್ಮಹಾರಥೋತ್ಸವವು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ನಡೆಯಲಿದೆ.

ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ವಾದ್ಯವಾದನಗಳ ಸುತ್ತುಬಲಿ ನಡೆದು ಶ್ರೀ ಮಂಜುನಾಥ ಸ್ವಾಮಿ  ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ರಥಕ್ಕೆ ಪ್ರದಕ್ಷಿಣೆ ಬಂದು ರಥಾರೂಢರಾಗಲಿದ್ದಾರೆ. 

ಭಕ್ತಾದಿಗಳು ಬಾಳೆಹಣ್ಣು ರಥಕ್ಕೆಸೆದು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಹೆಗ್ಗಡೆ ಸಹೋದರರು ಹಾಗು ಕುಟುಂಬಸ್ಥರು, ಕ್ಷೇತ್ರದ ಬಸವ, ಆನೆಗಳು, ವಾದ್ಯ ಮೇಳಗಳು, ಊರ ಪರಊರ ಭಕ್ತಾದಿಗಳು ಭಕ್ತಿ ಶ್ರದ್ಧೆಯಿಂದ ಭಾಗವಹಿಸುತ್ತಾರೆ.ಗೋವಿಂದಾ ನಾಮಸ್ಮರಣೆಯೊಂದಿಗೆ ರಥವನ್ನು ಅಣ್ಣಪ್ಪ ಬೆಟ್ಟದ ಬುಡದವರೆಗೆ ಎಳೆದು ಮರಳಿ ಸ್ವಸ್ಥಾನಕ್ಕೆ ತರುತ್ತಾರೆ.ಬಳಿಕ ಒಳಾಂಗಣದಲ್ಲಿ ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ಉತ್ಸವ ಸಮಾಪ್ತಿಗೊಳ್ಳುತ್ತದೆ.

ಎ.13ರಂದು ಮೇಷ ಸಂಕ್ರಮಣದಂದು ರಾತ್ರಿ ಧ್ವಜಾರೋಹಣ, ಎ.14ರಂದು ಸೌರಮಾನ (ವಿಷು)ಯುಗಾದಿ, ಧರ್ಮ ನೇಮ, ಎ.15 ರಂದು ಅಣ್ಣಪ್ಪ ದೈವಗಳ ನೇಮ, ಶ್ರೀ ಮಂಜುನಾಥ ಸ್ವಾಮಿ ಉತ್ಸವ, ಎ.16ರಂದು ಶ್ರೀ ಮಂಜುನಾಥ ಸ್ವಾಮಿ  ಉತ್ಸವ, ಎ.17ರಂದು ಬೈಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ಎ.18ರಂದು ಕಂಚಿಮಾರುಕಟ್ಟೆ ಉತ್ಸವ, ಎ.19ರಂದು ಲಲಿತೋದ್ಯಾನವನಕಟ್ಟೆ ಉತ್ಸವ, ಎ.20ರಂದು ಕೆರೆಕಟ್ಟೆ ಉತ್ಸವ, ಎ.21ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ರಥೋತ್ಸವ ನಡೆಯಿತು.

ಎ.23ರಂದು ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭ್ರತಸ್ನಾನ ಹಾಗೂ ರಾತ್ರಿ ಧ್ವಜಾವರೋಹಣ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ. 

Exit mobile version