Site icon Suddi Belthangady

ರೋಡ್ ಶೋ ಹಿನ್ನೆಲೆಯಲ್ಲಿ ಬಿಜೆಪಿಯವರು ಸೀರೆ ಹಂಚಿದ್ದಾರೆ- ಹಣ, ಹೆಂಡ ಹಂಚುತ್ತಿರುವುದೂ ಗಮನಕ್ಕೆ ಬಂದಿದೆ- ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ- ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಉಜಿರೆಯಲ್ಲಿ ನಡೆಯುವ ರೋಡ್ ಶೋ ಹಿನ್ನೆಲೆಯಲ್ಲಿ ಬಿಜೆಪಿಯವರು ಉಜಿರೆ, ಕೊಲ್ಲಿ ಸಹಿತ ವಿವಿದೆಡೆ ಸೀರೆ ಹಂಚಿಕೆ ಮಾಡಿದ್ದಾರೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕಿ ಲೋಕೇಶ್ವರಿ ವಿನಯಚಂದ್ರ ಆರೋಪಿಸಿದ್ದಾರೆ.

ಅವರು ಸಂತೆಕಟ್ಟೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎ.20ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಎ.17ರಂದು ಕಾಂಗ್ರೆಸ್ ಪಕ್ಷ ನಡೆಸಿದ ಜಾಥಾದಿಂದ ಬಿಜೆಪಿಗೆ ನಡುಕ ಉಂಟಾಗಿದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಹೆಂಡ, ಹಣ ಹಂಚುತ್ತಿರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ. ಚುನಾವಣಾ ವಿರೋಧಿ ಚಟುವಟಿಕೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಅವರು ಹೇಳಿದರು.

ಕೆಡಿಪಿ ಸದಸ್ಯರಾದ ವಕೀಲ ಸಂತೋಷ್ ಕುಮಾರ್ ಮಾತನಾಡಿ ಇಂದು ನಡೆಯುವ ಬಿಜೆಪಿ ರೋಡ್ ಶೋಗೆ ಹಂಚಿಕೆ ಮಾಡಿರುವ ಒಂದೇ ರೀತಿಯ ಸೀರೆಯನ್ನು ಯಾವುದೇ ದಾಖಲೆ ಇಲ್ಲದೆ ಉಟ್ಟುಕೊಂಡು ಬಂದಲ್ಲಿ ಅಂತವರನ್ನು ಬಂಧಿಸಬೇಕು ಎಂದು ಸಹಾಯಕ ಚುನವಾಣಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದರು.

ಲೋಕಸಭಾ ಚುನವಾಣೆಯ ತಾಲೂಕು ಉಸ್ತುವಾರಿ ಧರಣೇಂದ್ರ ಕುಮಾರ್ ಮಾತನಾಡಿ ಬೆಲೆ ಏರಿಕೆಯೇ ಮೋದಿಯ ಗ್ಯಾರಂಟಿ. ಪಂಚ ಗ್ಯಾರಂಟಿ ಯೋಜನೆಯಿಂದ ಜನರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದರು. ಲೋಕಸಭಾ ಚುನವಾಣೆಯ ತಾಲೂಕು ಉಸ್ತುವಾರಿ ಶೇಖರ್ ಕುಕ್ಕೇಡಿ ಮಾತನಾಡಿ ರೋಡ್ ಶೋಗೆ ಸೀರೆ ಹಂಚಿಕೆ ಮಾಡಿರುವುದು ಖಂಡನೀಯ. ಮಹಿಳೆಯರ ಮತಗಳು ಕಾಂಗ್ರೆಸಿಗೆ ವಾಲುತ್ತಿರುವುದನ್ನು ಕಂಡು ಬಿಜೆಪಿ ಭಯಭೀತವಾಗಿದೆ ಎಂದು ಹೇಳಿದರು.

ಗ್ರಾಮೀಣ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಚುನಾವಣಾ ಉಸ್ತುವಾರಿ ಮಹಮ್ಮದ್ ಹನೀಫ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version