ಧರ್ಮಸ್ಥಳ: ಸಂಸ್ಥೆಗಳ ಧ್ಯೇಯವನ್ನು ಅರಿತು ನೌಕರರು ಅದನ್ನು ಕಾರ್ಯರೂಪಕ್ಕೆ ತಂದಾಗ ಆ ಸಂಸ್ಥೆ ಬೆಳೆಯುತ್ತದೆ. ಸಿಬ್ಬಂದಿಗಳನ್ನು ಬಳಸಿಕೊಂಡು ಅವರನ್ನು ಬೆಳೆಸಿಕೊಂಡು ಹೋದಲ್ಲಿ ಉತ್ತಮ ಪ್ರಗತಿ ಸಾಧ್ಯ” ಎಂದು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ 36 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದು ನಾಯ್ಕ ಅವರ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನೌಕರರು ತೊಡಗಿಸಿಕೊಳ್ಳಲು ಕಲಿಯಬೇಕೇ ಹೊರತು ಅಡಗಿಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬಾರದು. ಕೈಗುಣ ಎನ್ನುವುದು ದೇವರು ಕೊಟ್ಟ ವರ ಅಂತಹ ಉತ್ತಮ ಕೈಗುಣವುಳ್ಳ ಚಂದು ನಾಯ್ಕ ಅವರು ಸಂಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ನೌಕರರು ಸಂಸ್ಥೆಯನ್ನು ನೈತಿಕವಾಗಿ ಬೆಳೆಸುವ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಉಜಿರೆ ಎಸ್ ಡಿ ಎಂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ “ದೈವೀ ಶಕ್ತಿ ಇರುವ ವ್ಯಕ್ತಿಯಲ್ಲಿ ಯೋಚನೆಗಳು ಬರುತ್ತವೆ ಅವು ಯೋಜನೆಗಳಾಗಿ ಮಾರ್ಪಟ್ಟು ಸಮಾಜಕ್ಕೆ ದಾರಿದೀಪವಾಗುತ್ತವೆ. ದೃಢಸಂಕಲ್ಪವುಳ್ಳ ವ್ಯಕ್ತಿ ಸಂಸ್ಥೆಯ ಏಳಿಗೆಗೆ ಕಾರಣನಾಗುತ್ತಾನೆ ಪ್ರಾಮಾಣಿಕ ಸೇವೆ ಸಲ್ಲಿಸುವ ನೌಕರನಿಗೆ ಆತ್ಮತೃಪ್ತಿಯ ಜತೆ ಭಗವಂತನ ಆಶೀರ್ವಾದವು ಇರುತ್ತದೆ” ಎಂದು ಹೇಳಿದರು.
ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿ “ಚಂದು ನಾಯ್ಕ ಅವರ ಮರೆಯಲಾರದ ಸೇವೆ, ತೊರೆಯಲಾರದ ಬೆಸುಗೆಯಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜಮುಖಿಯಾಗಿ ರೂಪಿತವಾಗಿರುವ ಅನೇಕ ಸಂಸ್ಥೆಗಳು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಜತೆ ಅವರ ಜೀವನಕ್ಕೆ ಭದ್ರ ಬುನಾದಿಯಾಗಿವೆ” ಎಂದು ಹೇಳಿದರು.ಚಂದು ನಾಯ್ಕ ಶ್ರೀ ಕ್ಷೇತ್ರದಿಂದ ದೊರೆತ ಅಪೂರ್ವ ಅವಕಾಶ ಜನರಿಗೆ ಸೇವೆಯನ್ನು ನೀಡಲು ಕಾರಣವಾಯಿತು ಎಂದು ಹೇಳಿದರು.
ಆಡಳಿತಾಧಿಕಾರಿ ಜಗನ್ನಾಥ್ ಉಪಸ್ಥಿತರಿದ್ದರು.
ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ವಂದಿಸಿದರು .ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಉಜಿರೆ ಇದರ ವೈಸ್ ಪ್ರಿನ್ಸಿಪಾಲ್ ಡಾ. ಸುಜಾತಾ ಸನ್ಮಾನ ಪತ್ರ ವಾಚಿಸಿದರು. ಅನನ್ಯಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.