Site icon Suddi Belthangady

ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ- ತುಳಿದು ಬದುಕಬೇಡಿ, ತಿಳಿದು ಬದುಕಿ: ಬಿ.ಸೋಮಶೇಖರ ಶೆಟ್ಟಿ

ಉಜಿರೆ: ಅಸ್ಪಶ್ಯತೆಯ ಬೇಗೆಯಲ್ಲಿ ಬೆಂದು, ತುಳಿತಕ್ಕೆ ಒಳಪಟ್ಟು ತರಗತಿಯ ಮೂಲೆಯಲ್ಲಿ ಕುಳಿತು ಕಲಿತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಂದು ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಇವರು ಹೇಳಿದರು.

ಸಂವಿಧಾನ ಮತ್ತು ಅಂಬೇಡ್ಕರ್ ಒಂದೇ ನಾಣ್ಯದ ಎರಡು ಮುಖ. ಶಿಕ್ಷಣ-ಸಂಘಟನೆ ಸಂಘರ್ಷದಿಂದ ಅಂಬೇಡ್ಕರ್ ಬೆಳೆದವರು. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭ್ರಾತೃತ್ವ ಸಂವಿಧಾನದ ನಾಲ್ಕು ಸ್ತಂಭಗಳು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದರೆ ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಬೇಕು. ಇದು ಅಂಬೇಡ್ಕರ್‌ರವರ ಆಶಯ. ಭಾರತಕ್ಕೆ ಸ್ಫೂರ್ತಿ ಆಗಿದ್ದ ಅಂಬೇಡ್ಕರ್‌ರವರು “ತುಳಿದು ಬದುಕಬೇಡಿ, ತಿಳಿದು ಬದುಕಿ” ಎಂಬುದನ್ನು ಜಗತ್ತಿಗೆ ಸಾರಿದವರು. ಏಕೆಂದರೆ ಒಂದು ಕಾಲದಲ್ಲಿ ತುಳಿತಕ್ಕೆ ಒಳಪಟ್ಟ ಇವರನ್ನು ಇಂದು ಇಡೀ ಜಗತ್ತೇ ತಿಳಿಯಲು ಆರಂಭಿಸಿದೆ ಎಂದು ಹೇಳಿದರು.

ತಮ್ಮ ಗುರುಗಳ ಹೆಸರಿಟ್ಟುಕೊಂಡ ಡಾ.ಬಿ.ಆರ್.ಅಂಬೇಡ್ಕರ್‌ರವರು ಪ್ರತೀ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಪ್ರಗತಿಗೆ ವಿದ್ಯೆಯೇ ಮೂಲ ಎಂಬುವುದು ಇವರ ಪ್ರಮುಖ ತತ್ವ. ಭಾರತದ ಮಹಾನ್ ವ್ಯಕ್ತಿಗಳಲ್ಲಿ ಇವರೂ ಕೂಡಾ ಒಬ್ಬರಾಗಿದ್ದಾರೆ. ಭಾರತವು ಕೇವಲ ವಿದೇಶಿಗಳಿಂದ ಸ್ವಾತಂತ್ರ್ಯಗೊಂಡರೆ ಸಾಲದು, ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿಯೂ ಸ್ವತಂತ್ರಗೊಂಡಾಗ ಮಾತ್ರ ಸದೃಢ ರಾಷ್ಟ್ರ ರೂಪುಗೊಳ್ಳುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಿದ್ಯಾಶ್ರೀ ಪಿ, ತಿರುಮಲೇಶ ರಾವ್ ಎನ್ ಕೆ ಹಾಗೂ ಚೈತ್ರಾರವರು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಮಹಾಲಕ್ಷ್ಮಿ ಸ್ವಾಗತಿಸಿ, ಸ್ವಾತಿ ವಂದಿಸಿ, ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version