ಬೆಳ್ತಂಗಡಿ : ಶರಾಬು ಕುಡಿಯಲು ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಚ್ಚಿನದಲ್ಲಿ ಹೊಡೆದಾಟ ಹಲ್ಲೆ ಮತ್ತು ಬೆದರಿಕೆ ಹಾಕಿದ ಘಟನೆ ನಡೆದಿದ್ದು ಆರೋಪಕ್ಕೆ ಸಂಬಂಧಿಸಿ ವ್ಯಕ್ತಿ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೆ ಆರೋಪ ಹೊತ್ತ ವ್ಯಕ್ತಿಯೂ ದೂರುದಾರರ ವಿರುದ್ಧ ಪ್ರತಿದೂರು ನೀಡಿದ ಪ್ರಸಂಗ ನಡೆದಿದೆ.
ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಸದ್ಗುರು ಹೋಟೆಲಿನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾಗ, ಆರೋಪಿ ಕೇಶವ ಪೂಜಾರಿ ಎಂಬಾತನು ಹೋಟೆಲಿನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು, ದೂರುದಾರರ ಹೋಟೆಲಿನಲ್ಲಿ ಕೆಲಸ ಮಾಡುವ ಚಂದ್ರ ಎಂಬವರನ್ನು ಉದ್ದೇಶಿಸಿ, ತನ್ನೊಂದಿಗೆ ಶರಾಬು ಕುಡಿಯಲು ಕರೆದಿರುತ್ತಾನೆ.
ಇದಕ್ಕೆ ಆಕ್ಷೇಪಿಸಿದಾಗ, ಆರೋಪಿಯು ಅವಾಚ್ಯ ಶಬ್ದದಿಂದ ಬೈದಿದ್ದಾನೆ.ಈ ಸಂದರ್ಭ ಮಗ ಹೃತಿಕ್ ರೈ ಕೇಶವ ಪೂಜಾರಿ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಬೈಯ್ಯ ಬಾರದೆಂದು ತಿಳಿ ಹೇಳಿ ಮನವೊಲಿಸಲು ಮುಂದಾಗಿದ್ದು ಈ ಸಂದರ್ಭ ಹೃತಿಕ್ ಮೇಲೆ ಕೇಶವ ಪೂಜಾರಿ ಹಲ್ಲೆ ನಡೆಸಿರುತ್ತಾನೆ.ಇದೇ ವೇಳೆ ಗಲಾಟೆ ಬಿಡಿಸಲು ಬಂದ ಹೋಟೆಲಿನ ಕೆಲಸದಾಳು ಚಂದ್ರ ಎಂಬವರಿಗೆ ಕೂಡ ಆತ ಕೈಯಿಂದ ಹಲ್ಲೆಗೈದು ಜೀವ ಬೆದರಿಕೆ ಹಾಕಿರುತ್ತಾನೆ.ಈ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರತಿಭಾ ಬಿ ರೈ (44) ಎಂಬವರ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಕೇಶವ ಪೂಜಾರಿಯು ಹೃತಿಕ್ ರೈ ಹಾಗೂ ಚಂದ್ರ ಎಂಬವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರತಿದೂರು ನೀಡಿದ್ದು ತನ್ನ ಮೇಲೆ ಇಬ್ಬರೂ ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಪೊಲೀಸರು ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.