Site icon Suddi Belthangady

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 221ನೇ ವಿಶೇಷ ಮದ್ಯವರ್ಜನ ಶಿಬಿರ- ಮದ್ಯವರ್ಜನ ಶಿಬಿರ ಮನಸ್ಸು ಪರಿವರ್ತನೆಗೆ ಅಡಿಪಾಯ: ಡಾ.ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: “ವ್ಯಸನದ ಚಟಕ್ಕೆ ಅಂಟಿಕೊಂಡವರ ಮನಪರಿವರ್ತನೆಗೆ ಹಮ್ಮಿಕೊಂಡ ವಿಶೇಷ ಮದ್ಯವರ್ಜನ ಶಿಬಿರದಿಂದ ವ್ಯಕ್ತಿ ಮತ್ತು ಕುಟುಂಬದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಚಟದ ಅಮಲಿನಿಂದ ವ್ಯಸನಿಗಳು ಭ್ರಮೆಗೊಳಗಾಗಿ ಮಾಡುವ ಕೆಲಸ, ಆನಂದಿಸುವ ಖುಷಿಯನ್ನೇ ಸಾಧನೆ ಎಂದು ತಿಳಿದು ಸಂಭ್ರಮಿಸುತ್ತಾರೆ.ಸ್ವಯಂ ಮಾಡಲು ಅಸಾಧ್ಯವಾದ ಕೆಲಸವನ್ನು ವ್ಯಸನಕ್ಕೆ ಬಲಿಬಿದ್ದು ಮಾಡಿದ್ದೇನೆಂಬ ಸಮರ್ಥನೆಯಿಂದ ಪದೇ ಪದೇ ಕುಡಿತ ಮತ್ತಿತರ ಚಟವನ್ನು ಮುಂದುವರಿಸುತ್ತಿರುವುದು ಸಾಮಾನ್ಯವಾಗಿದೆ.

ಇದರಿಂದ ಮಾನಸಿಕ, ದೈಹಿಕ, ಕೌಟುಂಬಿಕ ಸ್ವಾಸ್ಥ್ಯವನ್ನು ಕಳೆದುಕೊಂಡು ಒಂಟಿತನದಿಂದ, ಅನಾರೋಗ್ಯದಿಂದ ಬಳಲುವ ಇವರು ಶಿಬಿರಗಳಿಗೆ ಬಂದು ಮನಪರಿವರ್ತನೆಯಾಗಿ ನವಜೀವನ ಪ್ರಾರಂಭಿಸುವುದರಿಂದ ಗಣನೀಯ ಸಾಧನೆಯನ್ನು ಮಾಡಬಹುದಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 221ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ 86 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಆಧ್ಯಾತ್ಮ ಸರ್ವ ಸಮಸ್ಯೆಗಳಿಗೆ ಪರಿಹಾರವಾಗಿದೆ. ಭಕ್ತಿಗೆ ಶರಣಾಗುವ ಪ್ರತಿಯೊಬ್ಬರು ಸಾತ್ವಿಕರೆನಿಸಿಕೊಳ್ಳಬಹುದು. ವ್ಯಸನಿಗಳು ದುಷ್ಟರಲ್ಲ, ಪಾಪಿಗಳಲ್ಲ. ಕಬ್ಬಿಣಕ್ಕೆ ಕಿಲುಬು ಹಿಡಿದಂತೆ ಇವರಿಗೆ ವ್ಯಸನದ ಕಿಲುಬು ಅಂಟಿಕೊಂಡಿದೆ. ಚಿನ್ನಕ್ಕೆ ಕಿಲುಬು ಅನ್ವಯಿಸುವುದಿಲ್ಲ. ಹಾಗೆಯೇ ಇಂದು ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ದೇವರು ಚಿನ್ನದಂತೆ ಬದುಕಲು, ಕುಟುಂಬದೊಂದಿಗೆ ಜೀವನ ಸಾರ್ಥಕಗೊಳಿಸಲು ಶಿಬಿರದ ಮೂಲಕ ಆಶೀರ್ವದಿಸಿದ್ದಾರೆ. ಇನ್ನೆಂದಿಗೂ ವ್ಯಸನಮುಕ್ತರಾಗಿ ಬಾಳಿ” ಎಂದು ಅವರು ಶುಭ ಹಾರೈಸಿದರು.

ಶಿಬಿರದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಹೆಚ್. ಮಂಜುನಾಥ್ ಮಾತನಾಡಿ “ದೇವರ ಪ್ರಾರ್ಥನೆ, ಕೌಟುಂಬಿಕ ಸೌಹಾರ್ದತೆ, ಗುರು ಹಿರಿಯರಿಗೆ ಗೌರವ, ಕಾಯಕದಲ್ಲಿ ಪ್ರಾಮಾಣಿಕತೆ, ದೃಢಸಂಕಲ್ಪ ವ್ಯಸನಮುಕ್ತಿಗೆ ರಹದಾರಿ” ಎಂದು ಶಿಬಿರಾರ್ಥಿಗಳ ಕುಟುಂಬಸ್ಥರಿಗೆ ತಿಳಿಸಿ ಶಿಬಿರದ ಕುಟುಂಬದ ದಿನ ನಡೆಸಿಕೊಟ್ಟರು.

ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಿಸ್ ವರ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ಮೋಹನ್ ಕೆ, ಶಿಬಿರಾಧಿಕಾರಿ ವಿಧ್ಯಾದರ್, ನಂದಕುಮಾರ್, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ, ಕು. ರಂಜನಾ ರವರು ಸಹಕರಿಸಿದರು. ವರದಿ ವರ್ಷದಲ್ಲಿ 23 ವಿಶೇಷ ಮದ್ಯವರ್ಜನ ಶಿಬಿರಗಳನ್ನು ಈ ಕೇಂದ್ರದಲ್ಲಿ ನಡೆಸಿ ಒಟ್ಟು 1504 ವ್ಯಸನಿಗಳಿಗೆ ಮನಪರಿವರ್ತನೆಯಾಗಲು ಅವಕಾಶ ನೀಡಲಾಗಿದೆ.

ಈ ಶಿಬಿರಗಳಿಗೆ ಸ್ವಯಂಪ್ರೇರಿತರಾಗಿ ಶಿಬಿರಾರ್ಥಿಗಳು ಆಗಮಿಸಿ ಸಾರ್ಥಕರೆನಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಶೇಷ ಶಿಬಿರವು ಎ.15ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Exit mobile version