ವೇಣೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರ ಕನಸಿನ ಯೋಜನೆ ಯಕ್ಷಧ್ರುವ ಪಟ್ಲಾಶ್ರಯದ 26ನೇ ಮನೆಯ ಹಸ್ತಾಂತರವಾಗಿದೆ.
ವಿಶಿಷ್ಟ ಚೇತನ, ಪ್ರಸಿದ್ಧ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಅವರಿಗೆ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಟ್ರಸ್ಟಿನ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಹಾಗೂ ಊರಿನ ಗಣ್ಯರ, ಪತ್ರಕರ್ತರ ಮನೆಯನ್ನು ಹಸ್ತಾಂತರಿಸಲಾಯಿತು.
ಈ ಮನೆಯ ನಿರ್ಮಾಣದ ವೆಚ್ಚವನ್ನು ಉದ್ಯಮಿ, ಯಕ್ಷಧ್ರುವ ಪಟ್ಲ ಟ್ರಸ್ಟಿನ ದಾನಿ, ಪ್ರಧಾನ ಸಂಚಾಲಕರಾದ ಶಶಿ ಕೇಟರರ್ಸ್ ಮತ್ತು ಕಾಶೀ ಪ್ಯಾಲೇಸ್ ಉಜಿರೆಯ ಮಾಲಕ ಶಶಿಧರ ಶೆಟ್ಟಿ ಬರೋಡ ಕೊಡುಗೆಯಾಗಿ ನೀಡಿದ್ದಾರೆ.
ಕಲಾವಿದ ಮನೋಜ್ ಕುಮಾರ್, ತಮ್ಮ ಒಂದು ಕಾಲನ್ನು ಕಳೆದುಕೊಂಡರೂ ಎದೆಗುಂದದೆ ಕೃತಕ ಕಾಲನ್ನು ಜೋಡಿಸಿ ಯಕ್ಷಗಾನ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದು ಯಕ್ಷಗಾನ ಕಲೆಯ ಮೇಲಿರುವ ಪ್ರೀತಿ, ಅಭಿಮಾನ, ನಿಷ್ಠೆಯನ್ನು ತೋರಿಸುತ್ತದೆ ಎಂದು ಉದ್ಯಮಿ ಶಶಿಧರ ಶೆಟ್ಟಿ, ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ, ಟ್ರಸ್ಟಿನ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಲಾಶ್ರಯ ಯೋಜನೆಯ 12 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದ್ದು, 100 ಮನೆಗಳ ನಿರ್ಮಾಣದ ಯೋಜನೆ ಶೀಘ್ರದಲ್ಲಿ ಸಾಕಾರಗೊಳ್ಳಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.