Site icon Suddi Belthangady

ಪುದುವೆಟ್ಟು: ಪೈಪ್ ಲೈನ್ ಕೊರೆದು ಡೀಸೆಲ್ ಕಳವು ಪ್ರಕರಣ- ಐವರು ಆರೋಪಿಗಳ ಪೊಲೀಸ್ ಕಸ್ಟಡಿ ಮುಕ್ತಾಯ

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಡಿಸೇಲ್‌ ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಐವರು ಆರೋಪಿ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐವರ ಬಂಧ‌ನ: ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ದಿನೇಶ್ ಗೌಡ(40), ಪುದುವೆಟ್ಟು ಗ್ರಾಮದ ಮೋಹನ್ (28), ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ನಿವಾಸಿ ಜಯ ಸುವರ್ಣ(39),ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೆಹಳ್ಳಿಯ ನಿವಾಸಿ ದಿನೇಶ್ (40), ಕಡಬ ತಾಲೂಕಿನ ಕಡಬ ಗ್ರಾಮದ ಕಾರ್ತಿಕ್(28) ಬಂಧಿತರಾಗಿದ್ದು ಜೈಲು ಸೇರಿದ್ದಾರೆ. ಆರೋಪಿಗಳನ್ನು ನೆಲ್ಯಾಡಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ಕೋರ್ಟ್‌ ಗೆ ಹಾಜರುಪಡಿಸಲಾಗಿತ್ತು‌. ನ್ಯಾಯಾಲಯ ಆರೋಪಿಗಳಿಗೆ ಪೊಲೀಸ್ ಕಸ್ಟಡಿ ವಿಧಿಸಿತ್ತು. ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿರುವುದರಿಂದ ಎ.4ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದ್ದು ಅರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣ: ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್‌ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಯಾರೋ ಕಳ್ಳರು ಡಿಸೇಲ್‌ ಪೈಪ್ ಲೈನ್ ನಲ್ಲಿ ರಂದ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್‌ ಮೂಲಕ ಅಂದಾಜು 12,000 ಲೀ. ಡಿಸೇಲ್ ಕಳವು ಮಾಡಿದ್ದಾರೆ. ಕಳವಾದ ಡಿಸೇಲ್ ನ ಮೌಲ್ಯ ರೂ 9,60,000 ಎಂದು ಪರಿಗಣಿಸಲಾಗಿದೆ.ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಅ.ಕ್ರ : 19/2024 ಕಲಂ: 427,285,379 ಐಪಿಸಿ ಕಲಂ 15(2) ಪೆಟ್ರೋನೆಟ್ ಕಾಯ್ದೆ ಕಲಂ3(2) ಪ್ರಿವೆನ್ಸೆನ್ ಆಫ್‌ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿತ್ತು. ಕೃತ್ಯಕ್ಕೆ ಬಳಸಿದ 800 ಕಾರು,100 ಲೀಟರ್ ಡೀಸೆಲ್, ಪೈಪುಗಳು, ಡ್ರಿಲಿಂಗ್ ಮೆಷಿನ್, ವೆಡ್ಡಿಂಗ್ ಮೆಷಿನ್‌, ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಬೆಳ್ತಂಗಡಿ ಸರ್ಕಲ್ ಪೊಲೀಸ್ ವೃತ್ತ ನಿರೀಕ್ಷಕ ವಸಂತ ಅಚಾ‌ರ್ ನೇತೃತ್ವದಲ್ಲಿ ಧರ್ಮಸ್ಥಳ ಠಾಣಾ ಸಬ್ ಇನ್ಸೆಕ್ಟ‌ರ್ ಗಳಾದ ಅನಿಲ್‌ ಕುಮಾ‌ರ್, ಸಮರ್ಥ್ ಆರ್. ಗಾಣಿಗೇರ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Exit mobile version