ಬೆಳ್ತಂಗಡಿ: ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದ್ದಂತೆ ಚುನಾವಣೆ ಸಂಬಂಧ ಸ್ಥಾಪಿಸಲಾದ ವಿಶೇಷ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಂಡಿದೆ.
ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಹಾಗೂ ನಾರಾವಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ದಿನದ 24 ಗಂಟೆಯೂ ಇಲ್ಲಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಇಲ್ಲಿ ಓರ್ವ ಸ್ಟಾಟಿಕ್ ಸರ್ವೆ ಲೈನ್ ಲೀಡರ್, ಅಬಕಾರಿ ಪೊಲೀಸ್, ಟ್ರಾಫಿಕ್ ಪೊಲೀಸ್, ಸ್ಥಳೀಯ ಠಾಣೆ ಪೊಲೀಸ್, ವಿಡಿಯೊಗ್ರಾಫರ್ ಸೇರಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯನಿರ್ವಹಿಸದ ಗೇಟ್: ಚಾರ್ಮಾಡಿ ಚೆಕ್ ಪೋಸ್ಟ್‌ನಲ್ಲಿ ಗೇಟ್ ಇದ್ದರೂ ಅದು ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಇಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ತಪಾಸಣೆ ನಡೆಸಲಾಗುತ್ತದೆ.
ಪರಿಸರದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದ್ದು, ವಿಪರೀತ ದೂಳು ಇದೆ. ಇಲ್ಲಿ ರಸ್ತೆಯೂ ಇಕ್ಕಟ್ಟಾಗಿದ್ದು, ವಾಹನ ಸಂಚಾರಕ್ಕೂ ಸಮಸ್ಯೆ ಇದೆ. ತಪಾಸಣೆ ಸಂದರ್ಭ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.