Site icon Suddi Belthangady

ಬೈಪಾಡಿ ಬಸದಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವ

ಬಂದಾರು: ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾಮಹೋತ್ಸವದ ಅಂಗವಾಗಿ ಎ.01ರಂದು ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಯಾಗಮಂಡಲಾರಾಧನೆ, ನಾಂದಿಮಂಗಲ, ವಾಸ್ತುಪೂಜೆ, ನವಗ್ರಹಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ರಾತ್ರಿ ಗರ್ಭಾವತರಣ ವಿಧಿ, 108 ಕಲಶ ಅಭಿಷೇಕ ನಡೆಯಿತು.

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕರ ದಿವ್ಯಉಪಸ್ಥಿತಿ ಮತ್ತು ಆಶೀರ್ವಾದಗಳೊಂದಿಗೆ ಕಾರ್ಯಕ್ರಮಗಳು ನಡೆದವು.

ಬೆಳಾಲು ಉದಿತಕುಮಾರ್ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಸೇವಾಕರ್ತರುಗಳಾಗಿ ಸಹಕರಿಸಿದರು.

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದ ಪ್ರಧಾನಅರ್ಚಕ ಪ್ರತಿಷ್ಠಾಚಾರ್ಯ ಕೆ. ಜಯರಾಜ ಇಂದ್ರ ನೇತೃತ್ವದಲ್ಲಿ ಸ್ಥಳ ಪುರೋಹಿತ ಜೀವಿತ್ ಇಂದ್ರ ಹಾಗೂ ಪುರೋಹಿತವರ್ಗದವರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ವಾಸ್ತುಸಲಹೆಗಾರ ಮೂಡಬಿದ್ರೆಯ ಸುದರ್ಶನ್ ಇಂದ್ರ, ಬೆಳಾಲುಗುತ್ತು ಜೀವಂಧರ್‌ಕುಮಾರ್, ಡಾ. ಜಯಕೀರ್ತಿಜೈನ್, ಧರ್ಮಸ್ಥಳ, ಮಾಯಗುತ್ತು ರಾಜವರ್ಮಜೈನ್, ಉದಂಗರಜೈನ್, ಉಳಿಯಬೀಡು ಅಜಿತ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ: ಇಂದು, ಮಂಗಳವಾರ ಜಿನಬಾಲಕನ ಜನ್ಮಕಲ್ಯಾಣ ಮಹೋತ್ಸವ, ಜನ್ಮಾಭಿಷೇಕ, ನಾಮಕರಣ, ವಾಸ್ತುಪೂಜೆ, ನವಗ್ರಹಶಾಂತಿ, ಪದ್ಮಾವತಿದೇವಿ ಪ್ರತಿಷ್ಠೆ, ಬ್ರಹ್ಮಯಕ್ಷ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ.

ನಾಳೆಯ ಕಾರ್ಯಕ್ರಮ: ನಾಳೆ ಬುಧವಾರ ಕೇವಲ ಜ್ಞಾನ ಕಲ್ಯಾಣ, 504 ಕಲಶಗಳಿಂದ ಅಭಿಷೇಕ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಸೇವಾಕರ್ತರುಗಳಾಗಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ, ಕನಕಗಿರಿ ಜೈನಮಠದ ಪೂಜ್ಯ ಭುವನಕೀರ್ತಿಭಟ್ಟಾರಕ ಸ್ವಾಮೀಜಿ ಮತ್ತು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಮಂಗಲಪ್ರವಚನ ನೀಡುವರು.

ನಿವೃತ್ತ ಪ್ರಾಂಶುಪಾಲ ಎ. ಜಯಕುಮಾರ ಶೆಟ್ಟಿ, ಅರ್ಕುಳಬೀಡು ಮತ್ತು ಕೂಡಿಗೆ ವಿಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಬೈಪಾಡಿ ಬಸದಿಗೆ ದಾರಿ: ಬೆಳ್ತಂಗಡಿಯಿಂದ ಕೊಯ್ಯೂರು ಕ್ರಾಸ್, ಬಜಿಲ ಮೂಲಕ ಬೈಪಾಡಿ ಬಸದಿಗೆ ಹೋಗಬಹುದು ಅಥವಾ ಉಜಿರೆ, ಬೆಳಾಲು ಮೂಲಕವೂ ಬೈಪಾಡಿ ಬಸದಿ ತಲುಪಬಹುದು.

Exit mobile version