ಬರಾಯ: ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ಸೂಳಬೆಟ್ಟು ಇದರ ವತಿಯಿಂದ ಅಳದಂಗಡಿ ಸನಿಹದ ಬರಾಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ರಥಬೀದಿಯಲ್ಲಿ ಮಾ.30ರಂದು ನೃತ್ಯ ಭಜನೋತ್ಸವ ನೆರವೇರಿತು.ದೇವಳದ ಅರ್ಚಕ ಭಾರ್ಗವ ಮರಾಠೆ ಜ್ಯೋತಿ ಪ್ರಜ್ವಲಿಸಿ ಕುಣಿತ ಭಜನೆಗೆ ಚಾಲನೆ ನೀಡಿದರು.
ಕುಣಿತ ಭಜನೆಯ ತರಬೇತುದಾರ ಸಂದೇಶ ಮದ್ದಡ್ಕ ಅವರಿಂದ ತರಬೇತು ಪಡೆದ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ 23 ವಿವಿಧ ಭಜನಾ ಮಂಡಳಿಗಳ ಸುಮಾರು 600 ಭಜಕರ ನೃತ್ಯವು ಭಕ್ತಿಯ ಸಂಚಲನಕ್ಕೆ ಕಾರಣವಾಯಿತು.
ಉಜಿರೆಯ ಗಾನಸುರಭಿ ತಂಡದವರು ಹಾಡಿದ ಭಜನೆಗೆಳು ನೃತ್ಯ ಸಂಯೋಜನೆಗೆ ಮತ್ತಷ್ಟು ಮೆರುಗು ನೀಡಿತು.ದಂತ ವೈದ್ಯ ಡಾ.ಶಶಿಧರ ಡೋಂಗ್ರೆ ಹಾಗೂ ಪ್ರಗತಿಪರ ಕೃಷಿಕ ನಿರಂಜನ ಜೋಶಿ ಅವರು ಭಜನಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿಯನ್ನು ನೀಡಿ ಗೌರವಿಸಿದರು.
ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಉಪಸ್ಥಿತರಿದ್ದರು.ಭಾಗವಹಿಸಿದ ಭಜನಾ ಮಂಡಳಿ ಹಾಗೂ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತೋಟದಪಲ್ಕೆಯ ನಿವಾಸಿ ಲಕ್ಷ್ಮೀ ಹಾಗೂ ಬರಾಯದ ವಿದ್ಯಾರ್ಥಿ ರವಿ ಅವರಿಗೆ ಮಂಡಳಿ ವತಿಯಿಂದ ಆರ್ಥಿಕ ನೆರವನ್ನು ನೀಡಲಾಯಿತು.ಸೂಳಬೆಟ್ಟು ಸ.ಕಿ.ಪ್ರಾ.ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ಮತ್ತು ಬಳಗದವರ ನೇತೃತ್ವದಲ್ಲಿ ನಡೆದ ಭಜನಾ ಕಮ್ಮಟದಲ್ಲಿ ರಾಮ್ ಕುಮಾರ್ ಮಾರ್ನಾಡು ಕಾರ್ಯಕ್ರಮ ನಿರ್ವಹಿಸಿದರು.