Site icon Suddi Belthangady

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆ- ಸಮುದಾಯದ ಸಮಸ್ಯಗಳಿಗೆ ಸಂಘದಿಂದ ಧನಾತ್ಮಕ ಸ್ಪಂದನೆ: ಉಮೇಶ್ ನಾಯ್ಕ್

ಬೆಳ್ತಂಗಡಿ: ತಾಲೂಕಿನ ಮರಾಟಿ‌ ಸಮುದಾಯದ ಸಮಸ್ಯೆಗಳಿಗೆ ಸಂಘ ಧನಾತ್ಮಕವಾಗಿ‌ ಸ್ಪಂದಿಸುತ್ತಿದ್ದು, ಹಲವು ಪ್ರಕರಣಗಳನ್ನು ರಾಜಿ ಇತ್ಯರ್ಥದ ಮೂಲಕ ಪರಿಹರಿಸಿಕೊಳ್ಳಲಾಗಿದೆ. ಸಮಾಜದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಎಂದು ತಾಲೂಕು‌ ಮರಾಟಿ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ನಾಯ್ಕ್ ಕೇಲ್ತಡ್ಕ ಹೇಳಿದರು.

ಅವರು ಮಾ.31ರಂದು ಉಜಿರೆಯ ಬಡೆಕೊಟ್ಟು, ಪ್ರಸಾದ್ ನಾಯ್ಕ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಸಂಘ ಹಲವಾರು ಜನಪರ ಕಾರ್ಯಗಳನ್ನು ನಡೆಸಿ ಸಮುದಾಯದ ವಿಶ್ವಾಸವನ್ನು ಗಳಿಸಿದೆ. ಮುಂದೆ ಸಭೆಯನ್ನು ಹಮ್ಮಿಕೊಂಡು ಸಲಹೆ, ಸೂಚನೆಗಳನ್ನು ಪಡೆದು ಅದನ್ನು ಕಾರ್ಯಗತಗೊಳಿಸಲು ಪದಾಧಿಕಾರಿಗಳು ಶ್ರಮಿಸಬೇಕು ಎಂದರು.

ಪದಾಧಿಕಾರಿಗಳಾದ ಸುರೇಶ್ ಹೆಚ್.ಎಲ್., ರವಿ ನಾಯ್ಕ ಬಡಕೋಡಿ, ಶ್ರೀನಿವಾಸ ಕಲ್ಲೇರಿ, ರಾಜೇಶ್ ನಾಯ್ಕ, ಪ್ರಭಾಕರ ನಾಯ್ಕ, ಹರೀಶ್ ನಾಯ್ಕ ಪೆರಾಜೆ, ಪ್ರಸಾದ್ ಅವರ ಪತ್ನಿ ಸತ್ಯವತಿ, ಮಕ್ಕಳಾದ ಪ್ರಾರ್ಥನಾ, ಪಂಚಮಿ ಮೊದಲಾದವರು ಇದ್ದರು.

ಸಂಘದ ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಸ್ವಾಗತಿಸಿ, ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ ವಂದಿಸಿದರು.

Exit mobile version