Site icon Suddi Belthangady

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಠಾಣೆಗೆ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿಗೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ: ಚುನಾವಣಾ ಸಂದರ್ಭ ಚುನಾವಣೆ ಆಯೋಗವು ಚುನಾವಣ ನಿಮಿತ್ತ ಹಲವು ಆದೇಶಗಳನ್ನು ಈ ಹಿಂದಿನಿಂದಲೂ ನೀಡುತ್ತಾ ಬರುತ್ತಿದೆ.

ಅಂತಹ ಒಂದು ಆದೇಶದಲ್ಲಿ ಚುನಾವಣಾ ಪ್ರಕ್ರಿಯೆ ದಿನಗಳಲ್ಲಿ ಕೃಷಿ ಬೆಳೆ ರಕ್ಷಣೆಗಾಗಿ ಕೃಷಿಕರು ಪರವಾಣಿಗೆ ಪಡೆದಿರುವ ಕೋವಿಗಳನ್ನು ಠಾಣೆಯಲ್ಲಿ ಇಡಬೇಕೆಂದಿರುತ್ತದೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಡಂಚಿನಲ್ಲಿ ನೆಲೆಸಿರುವ ಬಹುತೇಕ ಕೃಷಿಕರು ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಪರವಾಣಿಗೆ ಪಡೆದು ಕೋವಿ ಪಡೆದುಕೊಂಡಿರುತ್ತಾರೆ.

ಇದನ್ನು ತಮ್ಮ ರಕ್ಷಣೆಗೆ ಹಾಗೂ ಕೃಷಿ ಭೂಮಿಯಲ್ಲಿರುವ ಬೆಳೆಗಳ ರಕ್ಷಣೆಗಾಗಿ ದಶಕಗಳ ಕಾಲದಿಂದಲೂ ಅನುಭವಿಸಿಕೊಂಡು ಬಂದಿರುತ್ತಾರೆ.ಆದರೆ ಈ ಬಾರಿಯ ಚುನಾವಣಾ ನೀತಿಸಂಹಿತೆ ಸುಮಾರು ಮೂರು ತಿಂಗಳು ಇರುವುದರಿಂದ ನಮ್ಮ ಜಿಲ್ಲೆಯ ಚುನಾವಣೆ ಒಂದು ತಿಂಗಳಲ್ಲಿ ಮುಗಿಯುವುದರಿಂದ ನಮ್ಮ ಜಿಲ್ಲೆಗೆ ರಿಯಾಯಿತಿನ್ನು ನೀಡಬೇಕು.

ಇಲ್ಲದಿದ್ದರೆ ಕೋವಿಯನ್ನು ಠಾಣೆಯಲ್ಲಿ ಸುದೀರ್ಘ ದಿನಗಳ ಅವಧಿಗೆ ಠಾಣೆಯಲ್ಲಿ ಇಡಬೇಕಾದ ಕಾರಣ, ವನ್ಯ ಜೀವಿಗಳಿಂದ ರಕ್ಷಣೆ ಪಡೆದುಕೊಳ್ಳಲು ಕೃಷಿಕರಿಗೆ ಕಷ್ಟವಾಗುತ್ತಿದೆ.

ಈಗಾಗಲೇ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಧರ್ಮಸ್ಥಳ, ಪಟ್ರಮೆ, ಕೊಕ್ಕಡ, ನೆರಿಯ, ಚಾರ್ಮಾಡಿ ಪ್ರದೇಶಗಳಲ್ಲಿ ಕಾಡಾನೆ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು ತಮ್ಮ ಪ್ರಾಣ, ಬೆಳೆ ರಕ್ಷಣೆಗಾಗಿ ಇಟ್ಟುಕೊಂಡಿರುವ ಕೋವಿಯು ಠಾಣೆಯ ಪಾಲಾಗಿರುವುದರಿಂದ ಕೃಷಿಕರಿಗೆ ತುಂಬಾ ಕಷ್ಟವಾಗುತ್ತಿದೆ.

ತಾವು ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.

Exit mobile version