Site icon Suddi Belthangady

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಪತ್ರಕರ್ತರಿಗೆ ಬೆದರಿಕೆ- ಪತ್ರಿಕೆ ಬಹಿಷ್ಕರಿಸಲು ಕರೆ- ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುತ್ತಿರುವ ಶಾಸಕರ ವರ್ತನೆಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಂಡನೆ- ಕ್ಷಮೆಯಾಚಿಸಲು ಆಗ್ರಹ

ಬೆಳ್ತಂಗಡಿ: ಪತ್ರಕರ್ತರಿಗೆ ಸಾರ್ವಜನಿಕ ಸಭೆಯಲ್ಲಿ ಬೆದರಿಕೆ ಒಡ್ಡುವುದರ ಜತೆಗೆ ಪತ್ರಿಕೆ ಬಹಿಷ್ಕರಿಸುವಂತೆ ಕರೆ ನೀಡುವ ಮೂಲಕ‌ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನಡೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಖಂಡಿಸಿದೆ.

ಬೆಳ್ತಂಗಡಿ ತಾಲೂಕಿನ‌ ಕಳಂಜ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಬಡ ಜನರಿಗೆ ಆಗುತ್ತಿರುವ ಸಮಸ್ಯೆಯ ಕುರಿತು ಬೆಳಕು ಚೆಲ್ಲಿರುವ ಮತ್ತು ಸತ್ಯ ವರದಿ ಪ್ರಕಟಿಸಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಿರುವ ಸುದ್ದಿ ಬಿಡುಗಡೆ‌ ಪತ್ರಿಕೆಯ ಕುರಿತು ಬಹಿರಂಗ ಸಭೆಯಲ್ಲಿ ಲಘುವಾಗಿ ಮಾತನಾಡಿ ವರದಿಗಾರರನ್ನು ನಿಂದಿಸಿ ಬೆದರಿಸಿರುವ ಮತ್ತು ಪತ್ರಿಕೆಯನ್ನು ಬಹಿಷ್ಕರಿಸಬೇಕು, ಜಾಹೀರಾತು ನೀಡಬಾರದು ಎಂದು ಕರೆ ನೀಡಿ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಿ‌ರುವ ಶಾಸಕ ಹರೀಶ್ ಪೂಂಜ ಅವರ ವರ್ತನೆಯನ್ನು ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕ ಒಕ್ಕೊರಲಿನಿಂದ ಖಂಡಿಸುತ್ತದೆ.

ಈ ವಿಚಾರದಲ್ಲಿ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ನಿಯೋಜಿತ ಸಂಪಾದಕರೂ ಪುತ್ತೂರು ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರರೂ ಅಗಿರುವ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅವರ ನೇತೃತ್ವದಲ್ಲಿ ನಡೆಯುವ ಯಾವುದೇ ನ್ಯಾಯೋಚಿತ ಹೋರಾಟಕ್ಕೆ ಯೂನಿಯನ್‌ ಸದಾ ಬೆಂಬಲ ನೀಡುತ್ತದೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ‌ ಅಡ್ಡಿ ಪಡಿಸುವ ಮೂಲಕ ಜನಸಾಮಾನ್ಯರ ಧ್ವನಿಯನ್ನು ದಮನಿಸುತ್ತಿರುವ ಶಾಸಕ ಹರೀಶ್ ಪೂಂಜ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತದೆ ಎಂದು ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ಮತ್ತು ಪ್ರಧಾನ‌ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ತಿಳಿಸಿದ್ದಾರೆ.

Exit mobile version