ಬೆಳ್ತಂಗಡಿ: ಓದಿನ ಪ್ರಗತಿಯೊಂದಿಗೆ ಯಾವುದಾದರೊಂದು ಸರಕಾರಿ ಉದ್ಯೋಗದ ಗುರಿಯೊಂದಿಗೆ ಸಾಧನೆ ಮಾಡಿ. ಉನ್ನತ ಖಾಸಗಿ ಉದ್ಯೋಗಕ್ಕಿಂತ ಸಣ್ಣ ಸರಕಾರಿ ಉದ್ಯೋಗವಾದರೂ ಮೂರು ತಲೆಮಾರನ್ನು ಅದು ಸಂರಕ್ಷಿಸುತ್ತದೆ ಎಂದು ಬೆಂಗಳೂರಿನ ಯಶವಂತಪುರ ಕ್ರೈಸ್ಟ್ ವಿ.ವಿ ಯ ಸಹಾಯಕ ಕನ್ನಡ ಪ್ರಾಧ್ಯಾಪಕ, ಕಲಾಕುಂಚದ ಹಿರಿಯ ವಿದ್ಯಾರ್ಥಿ ಡಾ. ಪ್ರಶಾಂತ್ ದಿಡುಪೆ ಹೇಳಿದರು.
ಕಳೆದ 31 ವರ್ಷಗಳಿಂದ ಮುಂಡಾಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾಕುಂಚ ಆರ್ಟ್ಸ್ ಶಾಲೆಯಲ್ಲಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪ್ರದಾನ ಅತಿಥಿಯಾಗಿ ಮಾತನಾಡುತ್ತಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಪತ್ರಕರ್ತ, ಕಲಾಕುಂಚದ ಸ್ಥಾಪಕ ವಿದ್ಯಾರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಕಲಾಕುಂಚದ ಆರಂಭ, ಬಾಲ್ಯದ ನೆನಪುಗಳು, ಸಂಸ್ಥೆ ತೋರಿದ ಕಾಳಜಿ ಮತ್ತು ಮಾಡಿದ ಸಾಧನೆಗಳನ್ನು ವಿವರಿಸುತ್ತಾ, ನಿತ್ಯ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಅವುಗಳು ನಮ್ಮನ್ನಾಳದಂತೆ ನಾವೇ ಎಚ್ಚರದಿಂದ ಸಾಧನೆಗಳನ್ನು ದಾಖಲಿಸಬೇಕು. ಪರೀಕ್ಷೆಗಾಗಿ ಮಾತ್ರ ಓದದೆ ನಿತ್ಯ ಅಧ್ಯಯನ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಖ್ಯಾತ ಗಾಯಕ, ಕಲಾಕುಂಚ ಹಳೆವಿದ್ಯಾರ್ಥಿ ಅಶ್ವೀರ್ ಸೋಮಂತಡ್ಕ ಮಾತನಾಡಿ, ಪರಿಶ್ರಮ ಮತ್ತು ಗುರಿಯೊಂದಿಗೆ ಸಾಧಿಸಿ ಮೇಲೆಬನ್ನಿ. ನಿಮ್ಮ ಭವಿಷ್ಯವನ್ನು ನೀವೇ ಕಟ್ಟಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾಕುಂಚದ ಸಂಸ್ಥಾಪಕ, ಖ್ಯಾತ ಜಾನಪದ ಕಲಾವಿದ ಜಯರಾಂ ಕೆ ಕಲಾವಿದ ಮಾತನಾಡಿ, ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳು ಅನೇಕ ಸಾಧನೆ ಮಾಡಿದ್ದಾರೆ. ಡಾ ಪ್ರಶಾಂತ್ ಅವರು ಕಷ್ಟದಲ್ಲಿ ಕಲಿತು ಹಂಪಿ ಕನ್ನಡ ವಿ.ವಿ ಯಿಂದ ಡಾಕ್ಟರೇಟ್ ಪಡೆಯುವ ಮೂಲಕ ಹೆಜ್ಜೆ ಸಾಧಿಸಿರುವುದು ನಮಗೆ ಹೆಮ್ಮೆ. ಅದೇ ರೀತಿ ಸಂಗೀತ, ನಾಟಕ, ಸಂಘಟನೆ ಹೀಗೆ ವಿವಿಧ ರಂಗದಲ್ಲಿ ನಮ್ಮ ಹಲವು ವಿದ್ಯಾರ್ಥಿಗಳು ಮೆರೆಯುತ್ತಿದ್ದಾರೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಅತಿಥಿಗಳಾದ ಅಶ್ರಫ್ ಆಲಿಕುಂಞಿ, ಪ್ರಶಾಂತ್ ದಿಡುಪೆ ಮತ್ತು ಅಶ್ವೀರ್ ಅವರನ್ನು ಕಲಾಕುಂಚದ ಪರವಾಗಿ ಸನ್ಮಾನಿಸಲಾಯಿತು. ಅಶ್ರಫ್ ಆಲಿಕುಂಞಿ ಅವರು ಜಯರಾಂ ಕೆ ಅವರನ್ನು ರಾಮಾಯಣ ಮತ್ತು ಶ್ರೀ ಕೃಷ್ಣ ಪುಸ್ತಕ ನೀಡಿ ಪುರಸ್ಕರಿಸಿದರು. ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಗುರುಗಳಿಗೆ ಕಾಣಿಕೆ ನೀಡಿದರು.