Site icon Suddi Belthangady

ಅನಾಮಧೇಯ ಕರೆ- ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ: ಡಾ.ರಶ್ಮಿಯವರ ಪತಿ ದಿನೇಶ್‌ರವರಿಂದ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ನನ್ನ ಪತ್ನಿ ಡಾ.ರಶ್ಮಿಯವರಿಗೆ ಮತ್ತು ನನಗೆ ಅನಾಮಧೇಯ ಕರೆ ಮಾಡುತ್ತಿರುವ ಮತ್ತು ಯಾರದೋ ಪ್ರಸಾದದಿಂದ ಮನೆ ನಿರ್ಮಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೂಲತಃ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರು ಪಡೀಲ್‌ನಲ್ಲಿ ವಾಸ್ತವ್ಯ ಇರುವ ದಿನೇಶ್ ನಾಯ್ಕ್‌ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ವಿವರ: ಮಾ.11ರಂದು ನನ್ನ ಪತ್ನಿ ಡಾ.ರಶ್ಮಿ ಅವರು ತಮ್ಮ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪರಿಚಿತ ನಂಬ್ರದಿಂದ 2 ಬಾರಿ ಕರೆ ಬಂದಿದ್ದು ಅವರು ಕರೆ ಸ್ವೀಕರಿಸದೇ ಇದ್ದಾಗ ನನ್ನ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಆ ಕರೆಯಲ್ಲಿ ಯಾವುದೋ ವ್ಯಕ್ತಿ ಮಾತನಾಡುತ್ತಾ ಮನೆಯನ್ನು ಯಾರೋ ಕೊಟ್ಟಿರುವ ಪ್ರಸಾದದಿಂದ ಕಟ್ಟಲಾಗಿದೆ ಎಂದು ಹೇಳುತ್ತಿದ್ದು ಕೊನೆಯಲ್ಲಿ ನಮ್ಮ ಮನೆ ಅವಿನ್ಯಾದ ಹೆಸರನ್ನು ಪ್ರಸ್ತಾಪಿಸುವ ವೇಳೆ ವ್ಯಕ್ತಿಯೊಬ್ಬ ಗೇಲಿ ಮಾಡಿದಂತೆ ನಕ್ಕು ಕರೆಯನ್ನು ಕಟ್ ಮಾಡಿರುತ್ತಾರೆ. ಈ ಕರೆಯ ಮಧ್ಯದಲ್ಲಿ ನಾನು ಕಾಲ್ ರೆಕಾರ್ಡ್ ಮಾಡಿದ್ದು ಮತ್ತು ಆ ವಿಷಯವಾಗಿ ಅಂತರ್ಜಾಲದಲ್ಲಿ ಹುಡುಕಿದಾಗ ಮಂಗಳೂರಿನ ಯೂ ಟ್ಯೂಬ್ ಚಾನೆಲ್‌ನಲ್ಲಿ ಫೋನ್ ಕಾಲ್‌ನಲ್ಲಿದ್ದ ಆಡಿಯೋಗೆ ಹೋಲುವ ವಿಡಿಯೋವೊಂದರಲ್ಲಿ ನನಗೆ ತಿಳಿದಂತೆ ವ್ಯಕ್ತಿಯೋರ್ವರು ನಮ್ಮ ವೈಯುಕ್ತಿಕ, ಅದರಲ್ಲೂ ನಮ್ಮ ಮನೆ ಅವಿನ್ಯಾದ ವಿಡಿಯೋ ತೋರಿಸಿ ಆಧಾರ ರಹಿತವಾಗಿ ಈ ಮನೆಯನ್ನು ಯಾರದೋ ಪ್ರಸಾದದಿಂದ ಕಟ್ಟಿದ್ದಾರೆ ಎಂದು ಆರೋಪಗಳನ್ನು ಮಾಡಿರುತ್ತಾರೆ.ನಾನು ಮತ್ತು ನನ್ನ ಪತ್ನಿ ಡಾ.ರಶ್ಮಿಯವರು ಸ್ವಂತ ದುಡಿಮೆಯಿಂದ ಮನೆ ನಿರ್ಮಿಸಿದ್ದು ಅವರ ಆರೋಪಗಳಿಗೆ ಉತ್ತರವಾಗಿ ಸೂಕ್ತ ದಾಖಲೆಗಳೊಂದಿಗೆ ಅದೇ ಯೂ ಟ್ಯೂಬ್ ಚಾನೆಲ್‌ನಲ್ಲಿ ಕಮೆಂಟ್ ಮಾಡಿದ ಕೂಡಲೇ ಅದನ್ನು ತಕ್ಷಣವೇ ಅಳಿಸಿ ಸತ್ಯವನ್ನು ಮರೆ ಮಾಚುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಕಲಂಕುಷವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ನಾಯ್ಕ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಬೆಳ್ತಂಗಡಿ ಠಾಣಾ ಪೊಲೀಸರು ದೂರು ಸ್ವೀಕರಿಸಿದ್ದಾರೆ.

Exit mobile version