Site icon Suddi Belthangady

ಬೆಳ್ತಂಗಡಿ: ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ

ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯುವ ಬಗ್ಗೆ ಗೊತ್ತಿಲ್ಲದ ವ್ಯಕ್ತಿ, ಅಪರಿಚಿತನಲ್ಲಿ ಹಣ ತೆಗೆದುಕೊಡುವಂತೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ್ದು, ಎಟಿಎಂ ಕಾರ್ಡ್ ಬದಲಾಯಿಸಿ ವಾಪಸು ನೀಡಿದ ವ್ಯಕ್ತಿ ಬಳಿಕ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ. ಲಪಟಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೆಲಂತಬೆಟ್ಟು ಗ್ರಾಮದ ಶರೀಫ್ (53) ಎಂಬವರು ವಂಚನೆಗೆ ಒಳಗಾದವರು.

ಬೆಳ್ತಂಗಡಿ ಕಸಬಾ ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್ ಒಂದರ ಎಟಿಎಂನಿಂದ ಹಣ ತೆಗೆಯುವ ನಿಟ್ಟಿನಲ್ಲಿ ಜ.11ರಂದು ತೆರಳಿದ್ದು, ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ, ಪಿನ್ ನಂಬರ್ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿದ್ದರು.

ಅಪರಿಚಿತ ವ್ಯಕ್ತಿಯು 3,000ರೂ.ಗಳನ್ನು ಎಟಿಎಂ ನಿಂದ ತೆಗೆದು ನೀಡಿರುತ್ತಾನೆ.

ಮೂರು ದಿನಗಳ ನಂತರ ಇವರ ಖಾತೆಯಿಂದ 1,05,300 ರೂ. ಕಡಿತವಾಗಿರುವ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ಗೊತ್ತಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Exit mobile version