ಉಜಿರೆ: “ವ್ಯಸನಮುಕ್ತ ಜೀವನಕ್ಕಾಗಿ ಪ್ರಮುಖವಾಗಿ ದೇವರ ಇರುವಿಕೆಯನ್ನು ಒಪ್ಪಿಕೊಳ್ಳುವುದು, ಕುಟುಂಬದ ಸದಸ್ಯರ ಪ್ರೀತಿಯನ್ನು ಸಂಪಾದಿಸುವುದು, ಗುರು ಹಿರಿಯರನ್ನು ಗೌರವಿಸುವುದು, ಕಾಯಕವನ್ನು ನಂಬಿ ಸಾಧನೆ ಮಾಡುವುದಾಗಿದೆ. ಕುಟುಂಬದಲ್ಲಿ ದೇವರ ಪರಿವಾರ ಸ್ಥಾಪಿಸಿ ದೇವರಿಗೆ ಉಪಚಾರ ಮಾಡಿದಾಗ ಸರ್ವಂತರ್ಯಾಮಿ ದೇವರು ಕುಟುಂಬಗಳಲ್ಲಿ ಆಶೀರ್ವದಿಸುತ್ತಾನೆ.ದೈವತ್ವ ಇದ್ದಲ್ಲಿ ನಕಾರಾತ್ಮಕ ಚಿಂತನೆಗಳು ಬರುವುದಿಲ್ಲ. ಶಾಂತಿ ನೆಮ್ಮದಿಯ ಜೀವನಕ್ಕೆ ವ್ಯಸನಮುಕ್ತಗೊಳ್ಳುವುದು ಅತ್ಯವಶ್ಯಕ ಎಂದು” ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ್ ರವರು ತಿಳಿಸಿದರು.
ಉಜಿರೆ, ಲಾಯಿಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ 219ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬದ ದಿನ ಮತ್ತು ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 73 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್ ರವರು ಆಗಮಿಸಿ ಶಿಬಿರಾರ್ಥಿಗಳ ದೃಢ ಸಂಕಲ್ಪಕ್ಕೆ ಪೂರಕವಾದ ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಆರ್. ಶಂಕರ್, ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗಂಗಾಧರ್ ಭಟ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕ್ ವಿ.ಪಾಯ್ಸ್, ಜಗದೀಶ್ ನೆಲ್ಲಿಕಟ್ಟೆ, ಡಿ.ಎ.ರಹಿಮಾನ್, ಸುನಂದ ದಿನಕರ್, ಲತಾ ಗಣೇಶ್, ಪ್ರೋ.ಶಂಕರ್, ಪಟ್ಟಾಭಿರಾಮ ಸುಳ್ಯ, ಅಶೋಕ್ ಪೊಳಲಿ ಆಗಮಿಸಿ ಮಾಹಿತಿ ನೀಡಿದರು.
ಶಿಬಿರವನ್ನು 8 ದಿನಗಳ ಕಾಲ ನಡೆಸಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಶಿಬಿರದ ಕಾರ್ಯಚಟುವಟಿಕೆಗಳನ್ನು ನಡೆಸಲಾಗಿದೆ. ವೈಯಕ್ತಿಕ ಸಲಹೆ, ಕೌಟುಂಬಿಕ ಸಲಹೆ, ಯೋಗ, ಧ್ಯಾನ, ವ್ಯಾಯಾಮ, ಗುಂಪು ಸಲಹೆ,ಸಾಕ್ಷ್ಯಚಿತ್ರಗಳ ಮೂಲಕ ಮಾಹಿತಿ, ಗುಂಪು ಚಟುವಟಿಕೆ, ಭಜನೆ., ಮುಂತಾದ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಶಿಬಿರಾರ್ಥಿಗಳ ಮನಪರಿವರ್ತನೆಗೆ ಪ್ರಯತ್ನಿಸಲಾಗಿದೆ.
ಶಿಬಿರಾರ್ಥಿಗಳ ಮನೋವೈದ್ಯಕೀಯ ಚಿಕಿತ್ಸೆಯನ್ನು ಸಂಸ್ಥೇಯ ಮನೋವೈದ್ಯ ಡಾ.ಶಿಶಿರ್ ಮಂಗಳೂರು, ಸಲಹೆಗಾರರಾಗಿ ಮನಸ್ವಿನಿ ಸಂಸ್ಥೆಯ ಸುಮನ್ ಪಿಂಟೋ, ವೈದ್ಯಾಧಿಕಾರಿಯಾಗಿ ಡಾ.ಬಾಲಕೃಷ್ಣ ಭಟ್, ಡಾ.ಮಂಜುನಾಥ್, ಡಾ.ಮೋಹನ್‌ದಾಸ್ ಗೌಡರವರು ನೀಡಿದರು.
ಶಿಬಿರದಲ್ಲಿ ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿಗಳಾದ ನಾಗೇಂದ್ರ ಹೆಚ್.ಎಸ್., ಆರೋಗ್ಯ ಸಹಾಯಕರಾದ ಜಯಲಕ್ಷ್ಮೀ, ಕು. ಶ್ವೇತಾ ಸಹಕರಿಸಿದರು.
ಮುಂದಿನ ವಿಶೇಷ ಶಿಬಿರವು ಮಾ.18ರಂದು ನಡೆಯಲಿದೆ ಎಂದು ವೇದಿಕೆಯು ಪ್ರಕಟಣೆ ತಿಳಿಸಿದೆ.