Site icon Suddi Belthangady

 ಮಾ.9: ಧರ್ಮಸ್ಥಳದ ಪಶು ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆ

ಧರ್ಮಸ್ಥಳ: ಪಶುಪಾಲನ ಇಲಾಖೆ, ಪಶು ವೈದ್ಯಕೀಯ ಮತ್ತು ಪಶುಸಂಗೋಪನ ಇಲಾಖೆ ಇವುಗಳ ಅಡಿಯಲ್ಲಿ ದ.ಕ.ಜಿ.ಪಂ ವತಿಯಿಂದ ಕಾರ್ಯನಿರ್ವಹಿಸುವ ಧರ್ಮಸ್ಥಳ ಪಶು ಆಸ್ಪತ್ರೆಯ ನೂತನ ಕಟ್ಟಡ ಮಾ.9ರಂದು ಲೋಕಾರ್ಪಣೆಗೊಳ್ಳಲಿದೆ.

ಆರ್ ಐ ಡಿ ಎಫ್-20 ಯೋಜನೆ ಅಡಿ 27.9ಲಕ್ಷ ರೂ.ಗಳ ಅನುದಾನದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ನೂತನ ಕಟ್ಟಡಕ್ಕೆ ಇದೀಗ ಉದ್ಘಾಟನೆಯ ಭಾಗ್ಯ ಒದಗಿ ಬಂದಿದೆ.

ಧರ್ಮಸ್ಥಳ, ಪುದುವೆಟ್ಟು ಗ್ರಾಮದ ಸುಮಾರು 3,600 ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಈ ಕೇಂದ್ರ, ಕಾಯರ್ತಡ್ಕ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯನ್ನು ಹೊಂದಿದ್ದು, ಕಳೆಂಜ ಗ್ರಾಮದಲ್ಲಿ 1,800, ನಿಡ್ಲೆ ಗ್ರಾಮದಲ್ಲಿ 1,500 ಜಾನುವಾರುಗಳಿವೆ.

1,300 ಚದರ ಅಡಿ ವಿಸ್ತೀರ್ಣದ  ನೂತನ  ಕಟ್ಟಡದಲ್ಲಿ ಹೊರರೋಗಿ ಚಿಕಿತ್ಸಾ ವಿಭಾಗ, ಪ್ರಯೋಗಾಲಯ, ಔಷಧ ಸಂಗ್ರಹ ಕೊಠಡಿ, ಮುಖ್ಯ ಪಶುವೈದ್ಯಾಧಿಕಾರಿ ಕೊಠಡಿ, ಗಣಕಯಂತ್ರ ಕೊಠಡಿ,ಔಷಧ ವಿತರಣೆಗೆ ಪ್ರತ್ಯೇಕ ಸ್ಥಳ ಹಾಗೂ  ಶೌಚಾಲಯ ಮೊದಲಾದ ವ್ಯವಸ್ಥೆಗಳಿವೆ.

ಈ ನೂತನ ಕಟ್ಟಡವನ್ನು ಶನಿವಾರ ಗುರುವಾಯನಕೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಲೋಕಾರ್ಪಣೆಗೊಳಿಸಲಿದ್ದಾರೆ.

ಸಿಬ್ಬಂದಿ ಕೊರತೆ: ಧರ್ಮಸ್ಥಳ ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ, ಜಾನುವಾರು ಅಧಿಕಾರಿ ಹಾಗೂ ಎರಡು ಡಿ ದರ್ಜೆ ಹುದ್ದೆಗಳಿವೆ. ಪ್ರಸ್ತುತ ಎಲ್ಲಾ ಹುದ್ದೆಗಳು ಖಾಲಿ ಇದ್ದು ಡಾ.ಯತೀಶ್ ಕುಮಾರ್ ಎಂ.ಎಸ್. ಮುಖ್ಯಪಶು ವೈದ್ಯಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಗುತ್ತಿಗೆ ಆಧಾರದ ಓರ್ವ ಡಿ ದರ್ಜೆ ನೌಕರ ಮಾತ್ರ ಇದ್ದಾರೆ.

ಕಾಯರ್ತಡ್ಕ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಹಿರಿಯ ಪಶು ವೈದ್ಯ ಪರೀಕ್ಷಕ, ಡಿ ದರ್ಜೆ ಹುದ್ದೆಗಳಿದ್ದು ಎಲ್ಲಾ ಹುದ್ದೆಗಳು ಖಾಲಿ ಬಿದ್ದಿವೆ.

Exit mobile version