ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿನಿ ಪೂರ್ಣಿಮಾ ರವಿ ಅವರು ನಿರ್ದೇಶಿಸಿರುವ “ಗಾಡ್ಸ್ ವೈಫ್ಸ್ ಮೆನ್ಸ್ ಸ್ಲೇವ್ಸ್”, ದೇವದಾಸಿಯರ ಅಂತ್ಯವಿಲ್ಲದ ಕಥೆಗಳ ಕುರಿತ ಸಾಕ್ಷ್ಯಚಿತ್ರ ಅಮೆರಿಕಾದ ಪ್ರತಿಷ್ಠಿತ ಇಂಪ್ಯಾಕ್ಟ್ ಡಾಕ್ಸ್ ಪ್ರಶಸ್ತಿಗೆ ಆಯ್ಕೆಯಾಗಿದೆ.ಅವಾರ್ಡ್ ಆಫ್ ರೆಕಗ್ನಿಷನ್ ವಿಭಾಗದಲ್ಲಿ ಈ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ದೊರೆತಿದೆ.
ಈ ಸಾಕ್ಷ್ಯ ಚಿತ್ರ ಈವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ, ಮಣಿಪಾಲ ವಿಶ್ವವಿದ್ಯಾಲಯದ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ತುಮಕೂರು ವಿಶ್ವವಿದ್ಯಾಲಯ, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು, ಭಾರತಿದಾಸನ್ ವಿಶ್ವವಿದ್ಯಾಲಯ, ತಿರುಚ್ಚಿ, ತಮಿಳುನಾಡು ಹೀಗೆ ಹಲವು ಶೈಕ್ಷಣಿಕ-ಸಂಶೋಧನಾ ಕೇಂದ್ರಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದು, ತಜ್ಞರು, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರಿಂದ ಪ್ರಶಂಶಿಸಲ್ಪಟ್ಟಿದೆ.
ತಮ್ಮ ಅಧ್ಯಯನದ ಭಾಗವಾಗಿ ಉತ್ತರ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕದಾದ್ಯಂತ ತಿರುಗಾಡಿ, ದೇವದಾಸಿಯರನ್ನು ಭೇಟಿಯಾಗಿ ಅವರ ನೋವಿಗೆ ಈ ಸಾಕ್ಷ್ಯಚಿತ್ರದ ಮೂಲಕ ಚಲನಚಿತ್ರ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ರವಿ ಧ್ವನಿ ನೀಡಿದ್ದಾರೆ.ರಾಜ್ಯಾದ್ಯಂತ ಈ ಸಾಕ್ಷ್ಯ ಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ ರವಿ ಅವರು ಮಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಇಲ್ಲಿನ ಆಂಗ್ಲ ಭಾಷಾ ಸಹ ಪ್ರಾಧ್ಯಾಪಕಿ ನಯನಾ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಿ.ಎಚ್.ಡಿ ಅಧ್ಯಯನ ನಡೆಸುತ್ತಿದ್ದಾರೆ.ಅವರು ಪ್ರಸ್ತುತ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.