Site icon Suddi Belthangady

ಎಸ್.ಡಿ.ಎಂ ಮಾಧ್ಯಮ ಪರ್ವ ರಾಷ್ಟ್ರೀಯ ವಿಚಾರ ಸಂಕಿರಣ- ನಿಷ್ಪಕ್ಷಪಾತ ನಿಷ್ಠುರತೆಗೆ ಸತ್ಯಶೋಧಕ ಪ್ರಜ್ಞೆ ಅಗತ್ಯ: ಅಜಿತ್ ಹನಮಕ್ಕನವರ್

ಉಜಿರೆ:ಸತ್ಯದ ಬಿಂಬಿಸುವಿಕೆಯ ಬದ್ಧತೆ, ಕೇಳಿದ್ದನ್ನು ದೃಢೀಕರಿಸಿಕೊಳ್ಳುವ ಪ್ರಜ್ಞೆಯು ಪತ್ರಕರ್ತರು ನಿಷ್ಠುರ, ನಿಷ್ಪಕ್ಷಪಾತ ದೃಷ್ಟಿಕೋನ ಹೊಂದಲು ಸಹಾಯಕವಾಗುತ್ತದೆ ಎಂದು ಸುವರ್ಣ ನ್ಯೂಸ್ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಅಭಿಪ್ರಾಯಪಟ್ಟರು.

ಅವರು ಉಜಿರೆಯ ಎಸ್.ಡಿ.ಎಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಬಿ.ವೊಕ್ ಡಿಜಿಟಲ್ ಮೀಡಿಯಾ-ಫಿಲ್ಮ್ ಮೇಕಿಂಗ್ ವಿಭಾಗಗಳ ಸಹಭಾಗಿತ್ವದಲ್ಲಿ ’ಮಾಧ್ಯಮ, ಸಂಸ್ಕೃತಿ, ಮತ್ತು ತಂತ್ರಜ್ಞಾನ: ಸಾಮಾಜಿಕ-ರಾಜಕೀಯ ಸಂರಚನಾತ್ಮಕ ನೋಟ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸಂಚಲನ ಮೂಡಿಸುವ ಸಾಮಾಜಿಕ ಬದಲಾವಣೆ ನೆಲೆಗೊಳಿಸುವ ಉದ್ದೇಶದೊಂದಿಗೆ ಇರುವ ವ್ಯಕ್ತಿತ್ವದವರಿಗೆ ಸುದ್ದಿ ಮಾಧ್ಯಮ ಜಗತ್ತು ಅಪೂರ್ವ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಹೆಚ್ಚಿನ ರಜೆಯ ಸೌಲಭ್ಯಗಳು ಮತ್ತು ಬಿಕ್ಕಟ್ಟುರಹಿತವಾದ ಆರಾಮದಾಯಕ ವೃತ್ತಿ ವಾತಾವರಣ ನಿರೀಕ್ಷಿಸುವವರು ಮಾಧ್ಯಮಗಳ ವೃತ್ತಿಪರ ನೀರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಸಲಾಗದು ಎಂದರು.
ಸಮೂಹ ಮಾಧ್ಯಮ ವಿದ್ಯಾರ್ಥಿಗಳು ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ಸಂವಹನ ಕೌಶಲ್ಯ ರೂಢಿಸಿಕೊಳ್ಳಬೇಕು.ಜ್ಞಾನ ಸಾಮರ್ಥ್ಯ, ವಿಶ್ಲೇಷಿಸುವ ಚಾಕಚಕ್ಯತೆ ಹೊಸ ಕಾಲದಲ್ಲಿ ಅನ್ವಯಿಸುವ ಕೌಶಲ್ಯದಿಂದ ಅರ್ಥಪೂರ್ಣತೆ ಪಡೆದುಕೊಳ್ಳುತ್ತವೆ ಎಂದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ಹೊಸ ತಾಂತ್ರಿಕ ಆವಿಷ್ಕಾರಗಳು ಮಾಧ್ಯಮ ಸಂವಹನಕ್ಕೆ ವೇಗ ತಂದುಕೊಡಬಲ್ಲವು. ಆದರೆ ಶ್ರೇಷ್ಠ ಪತ್ರಕರ್ತರ ವೃತ್ತಿಪರ ವೈಶಿಷ್ಟ್ಯತೆಯನ್ನೇ ಮೀರೀಸುವಂಥ ಸ್ವಯಂಶಕ್ತಿ ತಂತ್ರಜ್ಞಾನಕ್ಕೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಕೆ ರವಿ ಸಮ್ಮೇಳನದ ಪ್ರಧಾನ ಆಶಯ ಪ್ರಸ್ತುತಪಡಿಸಿದರು.ಮಾಧ್ಯಮ ರಂಗದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಲ್ಲಿ ಕುತೂಹಲ, ಸಮರ್ಪಣಾ ಭಾವ ಇದ್ದಲ್ಲಿ ಪ್ರಗತಿ ಹೊಂದಬಹುದು.ವೃತ್ತಿ ಮೇಲಿನ ಪ್ರೀತಿ ಮತ್ತು ಪರಿಪೂರ್ಣತೆ ಮಾಧ್ಯಮ ಕ್ಷೇತ್ರದ ವೃತ್ತಿಪರತೆಗೆ ಪೂರಕವಾಗಿದೆ.ಈ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವ ಭಾರತೀಯ ಮಧ್ಯಮ ಮತ್ತು ವಿವಿಧ ವಿಶ್ವವಿದ್ಯಾನಿಲಯಗಳ ನಡುವೆ ಸೇತುವೆಯಾಗಿದೆ.ತರಗತಿಯಲ್ಲಿ ನಡೆಯುವ ಪಾಠದ ಜೊತೆಗೆ ಈ ರೀತಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಏಳಿಗೆಗೆ ಕಾರಣವಾಗುತ್ತವೆ ಎಂದರು.

ಎಸ್.ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿರ್ವಾತದಲ್ಲಿ ಯೋಚನೆ ಯೋಜನೆಗಳು ಮತ್ತೊಬ್ಬರನ್ನು ತಲುಪಲು ಸಾಧ್ಯವಿಲ್ಲ. ಅದಕ್ಕೆ ಮಾಧ್ಯಮ ಅತ್ಯಗತ್ಯವಾಗಿರುತ್ತದೆ. ವಿಜ್ಞಾನದ ಜಗತ್ತಿನಲ್ಲಿ ಹೇಗೆ ಶಬ್ದ ಪ್ರಸರಣಕ್ಕೆ ಗಾಳಿ ಅವಶ್ಯವೊ ಹಾಗೆಯೇ ಇಂದು ಸುದ್ದಿಗಳ ಪ್ರಸರಣಕ್ಕೆ ಮಾಧ್ಯಮವು ಮೂಲಭೂತ ಅಗತ್ಯದ ಪರಿಕರವಾಗಿದೆ ಎಂದು ಅಭಿಪ್ರಾಯಪಟ್ಟರು.

ಯಶಸ್ಸಿನ ಹಿಂದಿನ ಸೋಲಿನ ಮೆಟ್ಟಿಲುಗಳ ನೆನಪುಗಳ ಜೊತೆಗೆ ಯಶಸ್ಸಿನ ಸೂತ್ರವನ್ನು ತಿಳಿದು ಮಾಧ್ಯಮ ಜಗತ್ತಿನಲ್ಲಿ ಉನ್ನತಿಯನ್ನು ಕಾಣಬೇಕು. ಇಂದಿನ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಸಮೂಹ ಮಾಧ್ಯಮ ವೃತ್ತಿನಿರ್ವಹಣೆಯ ಸಂದರ್ಭದಲ್ಲಿ ಪ್ರಾಮಾಣಿಕತೆ, ಜಾಣ್ಮೆ, ಬದ್ಧತೆ ಮತ್ತು ವೈಚಾರಿಕತೆಯು ಅತೀ ಮುಖ್ಯ ಎಂದರು.ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನವು ಮನುಷ್ಯನ ಶಕ್ತಿಯಾಗಿದೆ. ಆ ಜ್ಞಾನವನ್ನು ಗಳಿಸಲು ನಿರಂತರ ಓದು ಅಗತ್ಯವಾಗಿದೆ. ಪರ್ತಕರ್ತರು ಪಕ್ಷಪಾತಿಯವಾಗಿರದೇ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ಸುವರ್ಣ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ್, ಅತಿಥಿಗಳಾದ ಕೊಪ್ಪಳ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಬಿ.ಕೆ ರವಿ, ಸಿಲ್ಚಾರ್‌ನ ಅಸ್ಸಾಂ ಕೇಂದ್ರಿಯ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಕೆ.ವಿ ನಾಗರಾಜ್ ಮತ್ತು ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಾದ ಸ್ಪೀಕ್ ಪಾರ್ ಇಂಡಿಯಾದ ವಿಜೇತ ಶಾಮ್‌ಪ್ರಸಾದ್ ಹೆಚ್.ಪಿ ಮತ್ತು ಕಮ್ಯೂನಿಟಿ ಲೀಡರ್‌ಶೀಪ್ ಅವಾರ್ಡ್ ವಿಜೇತ ಸೋಮೇಶ್ವರ ಗುರುಮಠ ಅವರನ್ನು ಸನ್ಮಾನಿಸಲಾಯಿತು.

ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿಯಾದ ಸ್ಯಾನ್ರಿಟಾ ಜಾಸ್ಮಿನ್ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಾಸ್ಕರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಬಿ.ವೊಕ್ ಡಿಜಿಟಲ್ ಮೀಡಿಯಾ-ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ವಂದಿಸಿದರು.

Exit mobile version