Site icon Suddi Belthangady

ಗುರಿಪಳ್ಳ ಶಾಲಾ ಹಳೆ ವಿದ್ಯಾರ್ಥಿಯಿಂದ ಅಪೂರ್ವ ಕೊಡುಗೆ

ಬೆಳ್ತಂಗಡಿ: ಪುಣೆಯಲ್ಲಿ ಸ್ವಉದ್ಯೋಗ ನಡೆಸುತ್ತಿರುವ ಗುರಿಪಳ್ಳ ಸರಕಾರಿ ಶಾಲಾ ಪೂರ್ವ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ಅವರು ಪೋಷಕರ ಸಭೆಯ ಸಂದರ್ಭ ಅಪೂರ್ವ ಕೊಡುಗೆ ಸಮರ್ಪಿಸುವ ಮೂಲಕ ತನ್ನ ಶಾಲೆಯ ಮೇಲಿನ ಅಭಿಮಾನವನ್ನು ಎತ್ತಿಹಿಡಿದರು.

ದಾನಿಗಳಾದ ಅವರು ಶಾಲೆಯ “ನಲಿಕಲಿ” ವಿಭಾಗದ ಮಕ್ಕಳಿಗೆ 5 ರೌಂಡ್ ಟೇಬಲ್‌ಗಳು, 35 ಕುರ್ಚಿಗಳು, 5 ರೇಕ್ ಗಳು, ಒಂದು ಕಪಾಟು, ಮರದಿಂದ ನಿರ್ಮಿಸಿದ 4 ಟೇಬಲ್ ಮತ್ತು 4 ಕುರ್ಚಿಗಳು, ಒಂದು ಫ್ಯಾನ್ ಇವಿಷ್ಟು ಕೊಡುಗೆಗಳನ್ನು ಈ ಸಮಾರಂಭದಲ್ಲಿ ಅರ್ಪಿಸಿದರು.

ಗುರಿಪಳ್ಳದ ಕೃಷಿಕರಾದ ರಮಾನಂದ ಶರ್ಮ, ಉಜಿರೆ ಗ್ರಾ.ಪಂ ಸದಸ್ಯ ಸಚಿನ್, ಶಾಲಾಭಿವೃದ್ದಿ ಸಮಿತಿಯ ಶಿಕ್ಷಣ ತಜ್ಞ ಪಟವರ್ಧನ್, ಬೆಂಗಳೂರು ಇಂಡಿಯನ್ ಬ್ಯಾಂಕ್ ನ‌ ನಿವೃತ್ತ ವಿಶೇಷ ಅಧಿಕಾರಿ ಸಾವಿತ್ರಿ, ಬ್ಯಾಂಕ್ ಆಫ್ ಬರೋಡ ಬೆಂಗಳೂರು ಇದರ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಮರಾಠೆ, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ, ಸ್ಟೇಟ್ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕಿ ಶಾರದಾ ಆಠವಳೆ, ಬೆಳ್ತಂಗಡಿಯ ಕೃಷಿಕ ಯೋಗೀಶ್ ಭಟ್, ಲಲಿತಾ ಸುಬ್ರಹ್ಮಣ್ಯ ಭಟ್ ಪುಣೆ ಹಾಗೂ ಭಾರತಿ ಪುಸ್ತಕ ಭಂಡಾರದ ರೇಖಾ ಹಾಗೂ ಕುಟುಂಬಸ್ಥರು ಹಾಜರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸವಿತಾ ಅವರು ಮಾತನಾಡಿ, ಬದುಕು ಕಟ್ಟೋಣ ಬನ್ನಿ‌ ತಂಡದ ಮೋಹನ್ ಕುಮಾರ್ ಮತ್ತು ಗ್ರಾ.ಪಂ ಅಧ್ಯಕ್ಷೆ ಉಷಾ ಅರವಿಂದ ಅವರು ಈ‌ ಹಿಂದೆ ಶಾಲೆಗೆ ಬಾಗಿಲೊಂದನ್ನು ಹಾಗೂ ಶೌಚಾಲಯದ ಬಾಗಿಲುಗಳನ್ನು ಹೊಸದಾಗಿ ಕೊಡುಗೆ ನೀಡಿದ್ದನ್ನು ಸ್ಮರಿಸಿದರು.

ಮುಖ್ಯ ಶಿಕ್ಷಕಿ ಮಂಜುಳಾ ಜೆ.ಟಿ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು. ‌ಅತಿಥಿ ಶಿಕ್ಷಕಿ ಅನಿತಾ ವಂದಿಸಿದರು.ಗೌರವ ಶಿಕ್ಷಕಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.

Exit mobile version