ಉಜಿರೆ: ನೃತ್ಯ, ಸಂಗೀತ, ಜಾನಪದ ಕಲೆಗಳು ಭಾರತೀಯ ಸಂಸ್ಕೃತಿಗೆ ತಮ್ಮದೇ ಕೊಡುಗೆ ನೀಡಿ ದೇಶ ಇಂದು ಎಲ್ಲ ದೃಷ್ಟಿಯಿಂದಲೂ ಶ್ರೀಮಂತವಾಗಿದೆ.ಯಕ್ಷಗಾನವನ್ನು ಕೇವಲ ಕಲೆಯಾಗಿ ನೋಡದೆ ಅದು ಸಮಾಜಕ್ಕೆ ಸಂಸ್ಕೃತಿಯನ್ನು ನೀಡುತ್ತಾ ಬಂದಿದೆ.ದೇಶ ವಿದೇಶಗಳಲ್ಲೂ ಯಕ್ಷಗಾನ ಕಲೆಗೆ ಪ್ರೋತ್ಸಾಹ ದೊರೆಯುತ್ತಿದೆ.ಜಿಲ್ಲೆಯ ಕಲಾವಿದರು ವಿದೇಶದಲ್ಲೂ ಯಕ್ಷಗಾನ ಕಲೆಯನ್ನು ಪಸರಿಸುತ್ತಿದ್ದಾರೆ.ಕಲೆಯ ಉಳಿವು, ಬೆರಳವಣಿಗೆಗೆ ಕಲಾವಿದರು ಕಾರಣರಾಗಿರುವಂತೆ ವಿದ್ಯಾರ್ಥಿಗಳು ಹಾಗು ಪೋಷಕರು ಉತ್ಸುಕರಾಗಿ ಜಾಗೃತಿ ಮೂಡಿದೆ.
ಕಳೆದ 10 ವರ್ಷಗಳಿಂದ ಯಕ್ಷಗಾನ ಕಲಿಕಾ ಕೇಂದ್ರ ನಡೆಸಿ ಗುರು ಮೋಹನ ಬೈಪಾಡಿತ್ತಾಯರು ವಿದ್ಯಾರ್ಥಿಗಳಿಗೆ ಕಲೆಯನ್ನು ಕಲಿಸಿ, ಬೆಳೆಸಿ ಪ್ರೋತ್ಸಾಹ ನೀಡಿ ಜೀವನದಲ್ಲಿ ಸಂಸ್ಕಾರ ನೀಡುತ್ತಿದ್ದಾರೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಅವರು ಫೆ.24ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಜನಸಭಾ ನೇತೃತ್ವದಲ್ಲಿ ಶ್ರೀ ಜನಾರ್ದನ ಸ್ವಾಮಿ ಯಕ್ಷ ಕಲಾ ವೇದಿಕೆಯ ಹಿಮ್ಮೇಳ ಕಲಿಕಾ ಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ ಹಾಗು ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಿಕಾ ಕೇಂದ್ರದಲ್ಲಿ ಚೆಂಡೆ, ಮದ್ದಳೆ, ಭಾಗವತಿಕೆ ಅಭ್ಯಾಸ ನಡೆಸಿದ 16 ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರು ಹೆಚ್ಚಿನ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಮುಂದೆ ಬಂದರೆ ನನಗೂ, ಕೇಂದ್ರಕ್ಕೂ ಹೆಸರು ಹಾಗು ಕೀರ್ತಿ.ಹೊಸ ಯುವ ಪ್ರತಿಭೆಗಳು ಮೂಡಿ ಬರಲಿ.ಯಕ್ಷಗಾನದಲ್ಲಿ ಅವರಿಗೆ ಉಜ್ವಲ ಭವಿಷ್ಯವಿರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ಬೆಳ್ತಂಗಡಿಯ ಶ್ರೀಶ ಮುಚ್ಚಿನ್ನಾಯ ಉಪಸ್ಥಿತರಿದ್ದರು.ಯಕ್ಷಜನ ಸಭಾ ಸಂಚಾಲಕ ವೆಂಕಟ್ರಮಣ ರಾವ್ ಬನ್ನೆಂಗಳ ಸ್ವಾಗತಿಸಿ, ಪ್ರಸ್ತಾವಿಸಿ ಮುಂದಿನ ವರ್ಷ ಕಲಿಕಾ ಕೇಂದ್ರದ ದಶಮಾನೋತ್ಸವವನ್ನು ವೈವಿಧ್ಯಪೂರ್ಣವಾಗಿ ಆಚರಿಸಲಾಗುವುದೆಂದು ನುಡಿದರು.
ರಾಮಕೃಷ್ಣ ಭಟ್ ಬಳಂಜ ನಿರೂಪಿಸಿ, ಡಾ.ಜಿ.ಪಿ.ಹೆಗ್ಡೆ ವಂದಿಸಿದರು.ಮೋಹನ ಬೈಪಾಡಿತ್ತಾಯ ಅವರ ಭಾಗವತಿಕೆಯಲ್ಲಿ ನಡೆದ ವಿದ್ಯಾರ್ಥಿಗಳ ರಂಗ ಪ್ರವೇಶ ಕಾರ್ಯಕ್ರಮವನ್ನು ಭವ್ಯ ಹೊಳ್ಳ ನಿರೂಪಿಸಿದರು.ರಾತ್ರಿ ಹಿರಿಯ ಕಿರಿಯ ಕಲಾವಿದರಿಂದ “ದಕ್ಷಾಧ್ವರ “ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.