Site icon Suddi Belthangady

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಯಶೋವರ್ಮ ಸ್ಮರಣಾರ್ಥ ಉಪನ್ಯಾಸ ಮಾಲೆ ‘ಅರಿವಿನ ದೀವಿಗೆ’ ಕಾರ್ಯಕ್ರಮ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಡಾ.ಬಿ.ಯಶೋವರ್ಮ ಅವರ ಸ್ಮರಣಾರ್ಥ ಉಪನ್ಯಾಸ ಮಾಲೆ ‘ಅರಿವಿನ ದೀವಿಗೆ’ಯ ನಾಲ್ಕನೇ ಸಂಚಿಕೆಯ ಕಾರ್ಯಕ್ರಮ ಕಾಲೇಜಿನ ಕಲಾ ಕೇಂದ್ರ (ಎಸ್.ಡಿ.ಎಂ. ಕಲಾಕೇಂದ್ರ)ದಲ್ಲಿ ಫೆ.23ರಂದು ನಡೆಯಿತು.

ಸೋನಿಯಾ ಯಶೋವರ್ಮ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಶೋವರ್ಮ ಅವರಿಗೆ ಸಾಹಿತ್ಯ ಅಭಿರುಚಿ ಇತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಅವರು ಪ್ರೇರಣೆ ನೀಡುತ್ತಿದ್ದರು ಎಂದರು.

ಅರಿವು ಕೇವಲ ಪುಸ್ತಕದಿಂದ ಮಾತ್ರವಲ್ಲ, ಬೇರೆ ಎಲ್ಲ ಕ್ಷೇತ್ರದಿಂದಲೂ ಸಿಗುತ್ತದೆ. ಹಾಗೆಯೇ, ರಕ್ತ ಸಂಬಂಧಕ್ಕಿಂತ ಜ್ಞಾನ ಸಂಬಂಧ ಹೆಚ್ಚು.ಹೇಮಾವತಿ ಅಮ್ಮ ಮತ್ತು ಯಶೋವರ್ಮ ರಕ್ತ ಸಂಬಂಧಕ್ಕಿಂತ ಹೆಚ್ಚು ಜ್ಞಾನ ಸಂಬಂಧ ಹೊಂದಿದವರು ಎಂದು ಅವರು ನೆನಪಿಸಿಕೊಂಡರು.

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ವಿದ್ಯಾರ್ಥಿಗಳು ಯಾವುದೇ ಕೆಲಸ ಮಾಡುವಾಗ ಆಸಕ್ತಿ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ, ಹೆಗ್ಗೋಡಿನ ನೀನಾಸಂ ರಂಗ ನಿರ್ದೇಶಕಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ವಿದ್ಯಾ ಹೆಗಡೆ ಅವರು ‘ರಂಗ ಸಂಗೀತ’ದ ಬಗ್ಗೆ ಮಾತನಾಡಿದರು. ನಾಟಕ ಹಾಗೂ ಇತರ ಕಲೆಗಳಿಗೂ ಇರುವ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ವಿದ್ಯಾರ್ಥಿಗಳು ಯಶೋವರ್ಮರ ಆದರ್ಶಗಳನ್ನು ತಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳಬೇಕು ಎಂದರು.

ನೀನಾಸಂ ಸಂಸ್ಥೆಯ ಸಂಗೀತ ನಿರ್ದೇಶಕ ಭಾರ್ಗವ, ಸಂಗೀತ ಶಿಕ್ಷಕ ಅರುಣ್ ಎನ್., ಎಸ್.ಡಿ.ಎಂ. ಕಾಲೇಜಿನ ಆಡಳಿತ ಕುಲಸಚಿವೆ ಡಾ. ಶಲೀಫ್ ಎ.ಪಿ., ಎಸ್.ಡಿ.ಎಂ. ಕಲಾಕೇಂದ್ರದ ಸಿಬ್ಬಂದಿ ಯಶವಂತ್ ಮತ್ತು ಚೈತ್ರಾ ಉಪಸ್ಥಿತರಿದ್ದರು.   

ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು.ಕಾರ್ಯಕ್ರಮ ಸಂಯೋಜಕ ಮಹೇಶ ಆರ್ ವಂದಿಸಿ, ನಿರೂಪಿಸಿದರು.

Exit mobile version