ಬೆಳ್ತಂಗಡಿ: ಕಲೆಗಾರನಿಗೆ ಅಭೂತಪೂರ್ವ ಕಲ್ಪನೆಗಳು ಮೂಡುತ್ತವೆ.ನೈಸರ್ಗಿಕ ವಸ್ತುಗಳಿಗೆ ಜೀವ ನೀಡುವ ಸತ್ಕಾರ್ಯವನ್ನು ಕಲೆಗಾರ ತನ್ನ ಕಲ್ಪನೆಯೊಂದಿಗೆ ಜಗತ್ತಿಗೆ ತೋರಿಸುತ್ತಾನೆ.ಕಲೆಗಾರನ ಕೈಗೆ ನಿಲುಕದ್ದು ಯಾವುದೂ ಇಲ್ಲ.ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಇಂಥದ್ದೊಂದು ಅಪರೂಪದ ಕಲಾಕೃತಿಗೆ ಸಾಕ್ಷಿಯಾಗುತ್ತಿದೆ.
ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕ್ಷೇತ್ರದ ಹೊರಾಂಗಣದಲ್ಲಿನ ಬಂಡೆಕಲ್ಲಿನ ಮೇಲೆ ಕಲ್ಲಡ್ಕದ ಕಲಾವಿದ ಸದಾಶಿವ ಶಿವಗಿರಿ ಕಲ್ಲಡ್ಕ ಹನುಮಂತ ಹಾಗೂ ಗಜರಾಜನ ಚಿತ್ರ ಬಿಡಿಸುವ ಮೂಲಕ ಕಲ್ಲಿಗೆ ಜೀವ ತುಂಬಿಸುವ ಕೆಲಸ ಮಾಡಿದ್ದಾರೆ. ಮಲಗಿರುವ ಗಜರಾಜನ ಶಿರದ ಮೇಲೆ ಜಟಾಧಾರಿ ವಿರಾಜಮಾನವಾಗಿ ಕುಳಿತಿರುವಂತೆ ಶಿವಲಿಂಗ ಇರಿಸಲಾಗಿದೆ.
ಈ ಆಕರ್ಷಕ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.ನಿಷ್ಪ್ರಯೋಜಕವಾಗಿದ್ದ ನೈಸರ್ಗಿಕ ಬಂಡೆಯನ್ನು ಕಲಾಕೃತಿಯಾಗಿಸಿದ ಕಲಾವಿದನ ಕಲ್ಪನೆ ಅಸಾಮಾನ್ಯವಾಗಿದ್ದು, ಇಲ್ಲಿ ಬಂದವರು ಜತೆಗೆ ಸೆಲ್ಫಿ, ಫೋಟೋ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ನಾವು ನೋಡುವ ದೃಷ್ಟಿಯಲ್ಲಿ ವಿವಿಧತೆ ಕಾಣುತ್ತದೆ: ಸದಾಶಿವ
ಪ್ರಕೃತಿಯನ್ನು ನಾವು ನೋಡುವ ದೃಷ್ಟಿಯಲ್ಲಿ ವಿವಿಧತೆ ಕಾಣುತ್ತದೆ.ಪೂರ್ವಿಕರು ಪ್ರಕೃತಿಯಲ್ಲಿ ದೇವರನ್ನು ಕಂಡವರು.ನಮ್ಮ ಮನೋಭಾವಕ್ಕೆ ತಕ್ಕಂತೆ ಸ್ಥಳದಲ್ಲಿನ ದೈವೀಶಕ್ತಿ ಕಾಣುತ್ತದೆ.ಕಲ್ಪನೆಗಳಿಗೆ ಮೂರ್ತರೂಪ ಸಿಗುತ್ತದೆ.ಆದ್ದರಿಂದ ಆತ ಬಂಡೆಯಲ್ಲಿ ಹನುಮಂತ ಹಾಗೂ ಆನೆಯ ಮುಖದ ಕಲಾಕೃತಿಯನ್ನು ಬಿಡಿಸಲು ಸಾಧ್ಯವಾಗಿದೆ- ಸದಾಶಿವ ಶಿವಗಿರಿ ಕಲ್ಲಡ್ಕ