Site icon Suddi Belthangady

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಪ್ರಸನ್ನಕುಮಾರ ಐತಾಳರಿಗೆ ಸನ್ಮಾನ 

ಉಜಿರೆ: ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ಸಾಧನೆಗೆ ವೇದಿಕೆ ಅನಾವರಣ ಮಾಡಿದ ಕೀರ್ತಿ ಡಾ.ಪ್ರಸನ್ನಕುಮಾರ ಐತಾಳರಿಗೆ ಲಭಿಸುತ್ತದೆ.ಶಿಕ್ಷಕನಾದವನಿಗೆ ವಿದ್ಯಾರ್ಥಿಗಳೇ ಆಸ್ತಿ. ಇದು ಇವರಿಗೆ ಲಭಿಸಿದೆ.ಹಾಗೆಯೇ ಇವರು ತಮ್ಮ ಜ್ಞಾನದ ಮೂಲಕ ಕೌಶಲ್ಯವನ್ನು ಅಳವಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದಾರೆ.ಇವರಿಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಕಲಾ ವಿಭಾಗದ ಡೀನ್ ಡಾ.ಶ್ರೀಧರ್ ಭಟ್ ತಿಳಿಸಿದರು.

ಮಂಗಳೂರಿನ ಶ್ರೀನಿವಾಸ ವಿಶ್ವ ವಿದ್ಯಾಲಯದ ಎ.ಶ್ಯಾಮ ರಾವ್ ಫೌಂಡೇಶನ್ ಕೊಡಮಾಡುವ ಎ.ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ್ ಐತಾಳ್ ಇವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಮಾತನಾಡಿದರು. 

ಸನ್ಮಾನ ಸ್ವೀಕರಿಸಿದ ಡಾ.ಪ್ರಸನ್ನಕುಮಾರ ಐತಾಳ್ ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕ ವೃತ್ತಿಯ ಜೀವನದ ವಿವಿಧ ಹಂತಗಳನ್ನು ವಿವರಿಸಿದರು.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಕರ ಆದ್ಯ ಕರ್ತವ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ, ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವವರು ಡಾ.ಐತಾಳರು.ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಬಯಸುವ ಇವರಿಗೆ ಸಹಜವಾಗಿಯೇ ಪ್ರಶಸ್ತಿ ಇವರನ್ನು ಅರಸಿ ಬಂದಿದೆ ಎಂದು ತಿಳಿಸಿ ಇವರನ್ನು ಅಭಿನಂದಿಸಿದರು.

ಗಣಿತಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಸರಕಾರಿ ಪ್ರಾಥಮಿಕ ಶಾಲೆ ಹಳೇಪೇಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಧ್ಯಾ ಇವರನ್ನು ಅಭಿನಂದಿಸಲಾಯಿತು.

ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ ಸ್ವಾಗತಿಸಿ, ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಪರಿಚಯಿಸಿದರು.ಜೀವಶಾಸ್ತ್ರ ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿ, ಆಂಗ್ಲ ಭಾಷಾ ಉಪನ್ಯಾಸಕಿ ಸ್ಮಿತಾ ವಂದಿಸಿದರು.

Exit mobile version