Site icon Suddi Belthangady

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ, ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

ಬೆಳ್ತಂಗಡಿ: ಮೊದಲ ಹಂತದಲ್ಲಿಯೇ ಸೂಕ್ತ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಉತ್ತಮ ಚಿಕಿತ್ಸೆ ಪಡೆದಾಗ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.ಕ್ಯಾನ್ಸರ್ ರೋಗಕ್ಕೆ ಹೆದರುವ ಅಗತ್ಯವಿಲ್ಲ ಸೂಕ್ತ ಔಷಧಿ ಸೇವನೆಯಿಂದ ಕ್ಯಾನ್ಸರ್ ರೋಗ ಗೆಲ್ಲಬಹುದು ಎಂದು ಕಾಯರ್ತಡ್ಕ ಸಂತ ಸೆಬಾಸ್ಟಿಯನ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ.ಜೋಸೆಫ್ ವಾಳುಕಾರನ್ ಅಭಿಪ್ರಾಯಪಟ್ಟರು.

ಅವರು ಫೆ.15 ರಂದು ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ, ಗ್ರಾಮ ಪಂಚಾಯತ್ ಕಳೆಂಜ, ಸ್ನೇಹಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ, ಸರ್ವಶ್ರೀ ಮಹಾಸಂಘ ಕಳೆಂಜ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇವುಗಳ ಆಶ್ರಯದಲ್ಲಿ ಕಾಯರ್ತಡ್ಕ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಬೃಹತ್ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಮಂಜುಳಾ ಜೋನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಜೆ.ಸಿ.ಐ ಕೊಕ್ಕಡ ಕಪಿಲ ಇದರ ನಿಕಟಪೂರ್ವ ಅಧ್ಯಕ್ಷರಾದ ಕೆ.ಶ್ರೀಧರ್ ರಾವ್ ಕಾಯಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಳೆಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಳೆಂಜ ವಲಯದ ಆಶಾ ಕಾರ್ಯಕರ್ತೆ ದೇವಕಿ ಎ.ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂದನೀಯ ಫಾ. ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ಸಮಗ್ರವಾಗಿ ವಿವರಿಸಿದರು.ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯ ಕಮಿಷನ್ ನಿರ್ದೇಶಕರಾದ ವಂದನೀಯ ಫಾ.ಮ್ಯಾಥ್ಯೂ ತಾಯೇಕ್ಕಾಟ್ಟೀಲ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ’ಸೋಜರವರು ಎಲ್ಲರನ್ನು ಸ್ವಾಗತಿಸಿ, ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇಲ್ಲಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಕು.ಕೀರ್ತನಾ ಧನ್ಯವಾದವಿತ್ತರು.ಸಂಸ್ಥೆಯ ಸ್ಪರ್ಶ ಯೋಜನೆಯ ಸಂಯೋಜಕರಾದ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಕಾಯರ್ತಡ್ಕ ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ, ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರ ಹಂಚಲಾಯಿತು.ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಮಂಗಳೂರು ಸಂತ ಅಲೋಶಿಯಸ್ ಹಾಗೂ ರೋಶನಿ ನಿಲಯ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ವ ಸಹಾಯ ಸಂಘಗಳ ಮಹಿಳೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Exit mobile version