Site icon Suddi Belthangady

ಕಣಿಯೂರು: ಸಂವಿಧಾನ ರಥ ಯಾತ್ರೆಗೆ ಸ್ವಾಗತ-ಗ್ರಾ.ಪಂ. ಸದಸ್ಯರ ಗೈರಿಗೆ ಆಕ್ರೋಶ

ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್‌ಗೆ ಆಗಮಿಸಿದ ಸಂವಿಧಾನ ರಥ ಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು.

ಪದ್ಮುಂಜ-ಅಂತರ ರಸ್ತೆ ಕ್ರಾಸ್‌ನಿಂದ ಮೆರವಣಿಗೆ ಮೂಲಕ ರಥವನ್ನು ಸ್ವಾಗತಿಸಿ ಪಂಚಾಯಿತಿ ಕಚೇರಿಗೆ ಕರೆತರಲಾಯಿತು. ಗ್ರಾಮ ಪಂಚಾಯಿತಿಯ 20 ಸದಸ್ಯರ ಪೈಕಿ ಹಾಜರಿದ್ದ ಏಕೈಕ ಸದಸ್ಯ ಕೃಷ್ಣ ನೀರಾಡಿಯವರು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ದಲಿತ ಮುಖಂಡರಾದ ಅಣ್ಣು ಸಾಧನ, ಶೇಖರ ಬಿ.ಕೆ, ಶ್ರೀನಿವಾಸ್ ಪಿ.ಎಸ್ ಮತ್ತು ಲೋಕೇಶ್ ನೀರಾಡಿ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ದೇಶಕ್ಕೆ ನೀಡಿದ ಕೊಡುಗೆ ಹಾಗೂ ತ್ಯಾಗದ ಬಗ್ಗೆ ತಿಳಿಸಿದರು. ಅಂಬೇಡ್ಕರ್‌ರವರು ಜಾರಿಗೆ ತಂದ ಸಂವಿಧಾನದಡಿಯಲ್ಲಿ ಮೀಸಲಾತಿ ಸ್ಥಾನ ಪಡೆದು ಅಧಿಕಾರ ಪಡೆದುಕೊಂಡ ಪಂಚಾಯತ್ ಸದಸ್ಯರು ಕಾರ್ಯಕ್ರಮಕ್ಕೆ ಗೈರು ಹಾಜರಿ ಆಗಿರುವುದಕ್ಕೆ ಇವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಬಂಧುತ್ವ ವೇದಿಕೆಯ ಚೆನ್ನಕೇಶವ, ಕಾರ್ಯದರ್ಶಿ ಪ್ರಕಾಶ್ ಕಣಿಯೂರು, ಅಚುಶ್ರೀ ಬಾಂಗೇರು, ಸಂತೋಷ್, ಮನೋಜ್, ಆಶಾ, ವಿಶ್ವನಾಥ ಶೆಟ್ಟಿ, ರಮಾನಂದ ಪೂಜಾರಿ ಮುಗೆರೋಡಿ, ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ, ಸಿಬ್ಬಂದಿಗಳಾದ ಉಮೇಶ್, ಪ್ರದೀಪ್, ಚಿರಂಜೀವಿ, ಲಕ್ಷ್ಮೀ, ರೇವತಿ, ರತ್ನ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದವರು, ಪ್ರಾಥಮಿಕ ಶಾಲೆಯ ಅಧ್ಯಾಪಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುರತ್ಕಲ್‌ನ ಕರಾವಳಿ ಜಾನಪದ ಕಲಾ ವೇದಿಕೆಯವರಿಂದ ಬೀದಿ ನಾಟಕ ನಡೆಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೇಲ್ ಸ್ವಾಗತಿಸಿ ವಂದಿಸಿದರು.

Exit mobile version