ಬೆಳ್ತಂಗಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಖ್ಯಾತ ಟಿ.ವಿ. ನಿರೂಪಕಿ ನವಿತಾ ಜೈನ್‌ರವರಿಗೆ ವಿದ್ಯುನ್ಮಾನ ಟಿ.ವಿ. ವಿಭಾಗದಲ್ಲಿ ಬೆಸ್ಟ್ ಆ್ಯಂಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪಂಜಿಕಲ್ಲು ಗ್ರಾಮದವರಾದ ನಿವೃತ್ತ ಮುಖ್ಯೋಪಾಧ್ಯಾಯ ಸಿಂಹಸೇನ ಇಂದ್ರ ಮತ್ತು ಅಧ್ಯಾಪಕಿ ವಿನೋದಿನಿಯವರ ಪುತ್ರಿ ನವಿತಾ ಜೈನ್ ಅವರು ಮಾಧ್ಯಮದಲ್ಲಿ ಸುದ್ದಿ ನಿರೂಪಣೆ, ಸಂವಾದ, ರಾಜಕೀಯ ವಿಶ್ಲೇಷಣೆ, ಚರ್ಚೆ, ಸಂದರ್ಶನ, ಜನಪ್ರಿಯ ಕಾರ್ಯಕ್ರಮಗಳ ಮೂಲಕ ಹಲವಾರು ಸಾಧಕರ ಸಂದರ್ಶನ, ಅನೇಕ ಕಾರ್ಯಕ್ರಮಗಳ ಪ್ರಸ್ತುತಿ, ಸುದ್ದಿ ವಾಹಿನಿಗಳ ಹಲವು ಕಾರ್ಯಕ್ರಮಗಳ ನಿರ್ಮಾಣ ಸಹಿತ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ.ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರೂಪಿಸಿದ, ಸಂಯೋಜಿಸಿದ ಅನುಭವವೂ ಇವರಿಗಿದೆ.
ಮುಖ್ಯವಾಗಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳ ನಿರೂಪಣೆ, ಅಖಿಲ ಭಾರತ ಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ನಿರೂಪಣೆ, ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರ ಶ್ರೀಬಾಹುಬಲಿ ಅಹಿಂಸಾ ದಿಗ್ವಿಜಯಮ್ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಿರೂಪಣೆ, ರಾಜ್ಯಮಟ್ಟದ ಜಿನ ಭಕ್ತಿಗೀತೆ ಸ್ಪರ್ಧೆಯ ನಿರೂಪಣೆ, ಬೆಂಗಳೂರಿನಲ್ಲಿ ನಡೆಯುವ ನಮ್ಮೂರ ಹಬ್ಬ ಕಾರ್ಯಕ್ರಮದ ನಿರೂಪಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿದ ಅನುಭವ ಹೊಂದಿರುವ ನವಿತಾ ಜೈನ್ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ಭಾಗವಹಿಸುತ್ತಿದ್ದಾರೆ.
ಐಸ್ ಕ್ರೀಮ್ ಎಂಬ ತುಳು ಚಲನಚಿತ್ರದ ನಿರ್ಮಾಣ ಮಾಡಿರುವ ಇವರು ವಿವಿಧ ಚಲನಚಿತ್ರಗಳಲ್ಲಿ, ಕಿರುಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಮಂಗಳೂರು ಆಕಾಶವಾಣಿ, ಈ ಟಿವಿ ಕನ್ನಡ ಹೈದರಾಬಾದ್, ಜನಶ್ರೀ ನ್ಯೂಸ್, ಸುವರ್ಣ ನ್ಯೂಸ್, ಈ ಟಿವಿ ನ್ಯೂಸ್ ಕನ್ನಡದಲ್ಲಿ ಕಾರ್ಯ ನಿರ್ವಹಿಸಿರುವ ನವಿತಾ ಜೈನ್ ಅವರು ಪ್ರಸ್ತುತ ನ್ಯೂಸ್ ೧೮ ಕನ್ನಡದಲ್ಲಿ ಮುಖ್ಯ ನಿರೂಪಕಿಯಾಗಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ಎಸ್.ವಿ.ಎಸ್. ಪದವಿಪೂರ್ವ ಕಾಲೇಜ್‌ನಲ್ಲಿ ಪದವಿಪೂರ್ವ ಶಿಕ್ಷಣ, ಬಂಟ್ವಾಳ ಎಸ್.ವಿ.ಎಸ್. ಕಾಲೇಜ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ನವಿತಾರವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಕಮ್ಯುನಿಕೇಶನ್ ಆ್ಯಂಡ್ ಜರ್ನಲಿಸಂ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಮತ್ತು ಮುಂಬಯಿಯಲ್ಲಿ ಇಂಡಸ್ಟ್ರಿಯಲ್ ರಿಲೇಶನ್ಸ್ ಆ್ಯಂಡ್ ಪರ್ಸನಲ್ ಮ್ಯಾನೇಜೆಂಟ್ ಸ್ನಾತಕೋತ್ತರ ಡಿಪ್ಲೊಮಾ ಪೂರೈಸಿದ್ದಾರೆ.ತನ್ನ ಸಾಧನೆಗಾಗಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ನವಿತಾ ಜೈನ್ ಅವರು ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಸ್ಟ್ ಆ್ಯಂಕರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.