Site icon Suddi Belthangady

ಉಜಿರೆ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ 2047ರಲ್ಲಿ ವಿಕಸಿತ ಭಾರತ- ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ: ಧರ್ಮದ ಮರ್ಮವನ್ನರಿತು ಶ್ರದ್ಧಾ-ಭಕ್ತಿಯೊಂದಿಗೆ, ಕಾನೂನು, ನಿಯಮಗಳ ಪಾಲನೆ ಮಾಡಿದಾಗ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ಸಿಗುತ್ತದೆ.ವೃತ-ನಿಯಮಗಳ ಅನುಷ್ಠಾನದೊಂದಿಗೆ ಸಂಸ್ಕಾರಯುತ, ಸಾತ್ವಿಕ ಜೀವನಶೈಲಿಯೇ ಧರ್ಮ ಆಗಿದೆ ಎಂದು ಒಡಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ವಿ. ಕೃಷ್ಣ ಭಟ್ಟ ಹೇಳಿದರು.

ಅವರು ಫೆ.03ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ “2047ರಲ್ಲಿ ವಿಕಸಿತ ಭಾರತ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಗುಣಮಟ್ಟದ ಶಿಕ್ಷಣ ಪದ್ಧತಿ ಹಾಗೂ ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯೊಂದಿಗೆ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬೇಕು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುಕುಲ ಪದ್ಧತಿ ಮೂಲಕ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿತ್ತು.ಧರ್ಮದ ನೆಲೆಯಲ್ಲಿ ಅರ್ಥ ಮತ್ತು ಕಾಮ (ಬೇಡಿಕೆ) ಈಡೇರಿಸಿ ಮೋಕ್ಷಸಾಧನೆ ಮಾಡಬೇಕು.ಪ್ರತಿಯೊಬ್ಬರೂ ಅವರವರ ವೃತ್ತಿಧರ್ಮವನ್ನು ಪಾಲಿಸಬೇಕು. ಪ್ರಕೃತಿ-ಪರಿಸರ ಸಂರಕ್ಷಣೆ ಮಾಡಿದಾಗ ಆರೋಗ್ಯಪೂರ್ಣ ಜೀವನ ಸಾಧ್ಯವಾಗುತ್ತದೆ.

ಆದರೆ ಸ್ವಾತಂತ್ರ್ಯ ದೊರಕಿದ ಬಳಿಕ ಜಾತ್ಯಾತೀತ ನೆಲೆ ಮತ್ತು ಪ್ರಗತಿಯ ಹೆಸರಿನಲ್ಲಿ ಶಿಕ್ಷಣ ವಿಧಾನದಲ್ಲಿ ಬ್ರಿಟಿಷ್ ಪದ್ಧತಿಯನ್ನೆ ಅನುಸರಿಸಲಾಗುತ್ತಿದೆ.ಪ್ರಗತಿಯ ಹೆಸರಿನಲ್ಲಿ ಪ್ರಕೃತಿ-ಪರಿಸರ ನಾಶವಾಗುತ್ತಿದೆ ಎಂದು ಅವರು ವಿಷಾದಿಸಿದರು.

ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಪಾಲನೆಯೊಂದಿಗೆ ನಾಯಕತ್ವ ಗುಣ ಬೆಳೆಸಿಕೊಂಡು ದೇಶದ ಪ್ರಗತಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡಿ, ಯುವಜನತೆ ದೇಶದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು, ಹೊಸ ಯೋಚನೆ, ಯೋಜನೆಗಳೊಂದಿಗೆ ದೇಶದ ಸರ್ವತೋಮುಖ ಪ್ರಗತಿಗಾಗಿ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.

ಖ್ಯಾತ ಅರ್ಥಶಾಸ್ತçಜ್ಞ ಜಿ.ವಿ. ಜೋಶಿಯವರು ಮಾತನಾಡಿ, ಅಧ್ಯಯನ ಮತ್ತು ಸಂಶೋಧನೆಗಳ ಫಲಿತಾಂಶಗಳು ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಬಳಕೆಯಾಗಬೇಕು. ಸರ್ಕಾರ ಈ ಬಗ್ಯೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ.ಕುಮಾರ ಹೆಗ್ಡೆ ಮಾತನಾಡಿ, ಜನಸಂಖ್ಯಾ ಸ್ಪೋಟ, ಬಡತನ ಮತ್ತು ಪರಿಸರ ಮಾಲಿನ್ಯ ದೇಶದ ಪ್ರಗತಿಗೆ ಮಾರಕವಾಗಿದೆ. ಯುವಜನತೆ ಆತ್ಮಾವಲೋಕನ ಮಾಡಿಕೊಂಡು ದೇಶದ ಸರ್ವತೋಮುಖ ಪ್ರಗತಿಗೆ ಅಮೂಲ್ಯ ಸೇವೆ ನೀಡಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮತ್ತು ಉಪನ್ಯಾಸಕ ಮಹೇಶ ಶೆಟ್ಟಿ ಉಪಸ್ಥಿತರಿದ್ದರು.ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಗಣರಾಜ ಕೆ. ಸ್ವಾಗತಿಸಿದರು.ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕಿ ಡಾ. ಸೌಮ್ಯ, ಬಿ.ಪಿ. ಧನ್ಯವಾದವಿತ್ತರು.

Exit mobile version