ಮುಂಡಾಜೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಫೆ.2 ರಂದು ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ತುಕ್ರಪ್ಪ ಕೆಂಬಾರೆಯವರು,”ಅಂಬೇಡ್ಕರ್ ಸಂವಿದಾನ ಕೊಟ್ಟಿದ್ದಾರೆ ಎಂದು ಹೇಳುತ್ತಾ ಇದ್ದರೆ ಸಾಕಾಗುವುದಿಲ್ಲ.ಅವರ ಸಾಧನೆಯನ್ನು ಸಮಗ್ರವಾಗಿ ಅರಿತುಕೊಳ್ಳಬೇಕು.ಅಂಬೇಡ್ಕರ್ ಅವರ ಕಾಲದಲ್ಲಿ ಶೋಷಿತ ವರ್ಗದ ಜನರು ಗೌರವಯುತವಾಗಿ ಹೊರಗೆ ಹೋಗಲು ಸಾಧ್ಯವಿರಲಿಲ್ಲ.ಅಂತಹ ಸ್ಥಿತಿಯಲ್ಲೂ ಅವರು ಅಮೇರಿಕ, ಇಂಗ್ಲೆಂಡ್‌ಗಳಿಗೆ ಹೋಗಿ ಅಧ್ಯಯನ ನಡೆಸಿ ಸಂವಿಧಾನ ಸಭೆಗೆ ಆಯ್ಕೆಯಾದಾಗ ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತನ್ನ ಜನರಿಗಾಗಿ ಏನಾದರೂ ಮಾಡಬೇಕೆಂದು ಮಾಡಿದರು.ಅದರ ಸತ್ಫಲ ಈಗ ಸಿಗುತ್ತಿದೆ.ನಾನು ಶಾಲೆಗೆ ಹೋಗುವಾಗಲೂ ಹರಿದ ಅಂಗಿ ಧರಿಸಿ ಹೋಗಿದ್ದಿದೆ.ನಾನೂ ವಸತಿ ನಿಲಯದ ವಿದ್ಯಾರ್ಥಿ.ಈಗ ವಸತಿ ಶಾಲೆಗಳೇ ಬಂದಿವೆ.ಇದನ್ನು ಬುದ್ಧಿ ಶಕ್ತಿಯಿಂದ ಉಪಯೋಗಿಸಿಕೊಂಡರೆ ವಿದ್ಯಾರ್ಥಿಗಳು ಏನನ್ನು ಬೇಕಾದರೂ ಸಾಧಿಸಬಹುದು” ಎಂದರು.
ಪ್ರಧಾನ ಉಪನ್ಯಾಸವನ್ನು ಮಾಡಿದ ಚಿಂತಕ ಅರವಿಂದ ಚೊಕ್ಕಾಡಿಯವರು,”ಅಂಬೇಡ್ಕರ್ ಅವರ ಜೀವನದ ಘಟನೆಗಳು ನಮಗೆಲ್ಲ ಪ್ರೇರಣಾದಾಯಿಯಾಗಿವೆ.ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ತತ್ವಗಳ ಮೂಲಕ ಸಾಮಾಜಿಕ ನ್ಯಾಯದ ಸಾಧನೆಯ ಮಾರ್ಗವನ್ನು ಅವರು ತೋರಿದರು.ರಾಜಕೀಯ ಸ್ವಾತಂತ್ರ್ಯಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಷ್ಟು ಅಗತ್ಯ ಎಂಬುದನ್ನು ಪ್ರತಿಪಾದಿಸಿದರು.ಅಂಬೇಡ್ಕರ್ ಓದು ಎಂದರೆ ಅವರ ಬರೆಹಗಳನ್ನು ಮಾತ್ರ ಓದುವುದಲ್ಲ.ಅವರ ಬದುಕನ್ನೂ ಓದಬೇಕು.ಆಗ ಅಭ್ಯುದಯದ ಮಾರ್ಗಗಳು ತೆರೆಯುತ್ತವೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಅವರು,”ಅಂಬೇಡ್ಕರ್ ಜನ್ಮಶತಾಬ್ಧಿಯ ನೆನಪಿಗಾಗಿಯೇ ಪ್ರಾರಂಭವಾದ ಶಾಲೆಯಲ್ಲಿ ನಡೆಸುತ್ತಿರುವ ಈ ಕಾರ್ಯಕ್ರಮ ಸರ್ಕಾರದ ಈ ಯೋಜನೆಯನ್ನು ಅರ್ಥಪೂರ್ಣವಾಗಿ ತಲುಪಿಸಲು ಪೂರಕವಾಗಿದೆ” ಎಂದರು.ಉಪಸಂಹಾರದ ಮಾತುಗಳನ್ನಾಡುತ್ತಾ ವಂದಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಮುರಳೀಧರ್ ಜಿ.ಎನ್ ಅವರು ಅಂಬೇಡ್ಕರ್ ಅವರ ಪಂಚ ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಅಗತ್ಯವೆಂದು ತಿಳಿಸಿದರು.ಶಾಲೆಯ ಪೋಷಕರ ಸಂಘದ ಅಧ್ಯಕ್ಷರಾದ ಪುರಂದರ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ‘ಅಂಬೇಡ್ಕರ್ ಬದುಕು- ಬರೆಹ ಪುಸ್ತಕ ಸಂಪುಟ’ ಗಳನ್ನು ನೀಡಲಾಯಿತು.ಅಂಬೇಡ್ಕರ್ ಅವರ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಮೋಹನ್ ಕುಮಾರ್ ಮತ್ತು ಭರತ್ ಎಮ್.ಜಿ ಪ್ರಥಮ, ಶ್ರೀಮಂತ ದ್ವಿತೀಯ, ಯಲ್ಲಪ್ಪ ತೃತೀಯ ಬಹುಮಾನ ಪಡೆದರು.
ಸಂವಿಧಾನದ ಕುರಿತ ಕ್ವಿಜ್ ಸ್ಪರ್ಧೆಯಲ್ಲಿ ನವೀನ ಕೆ ಪ್ರಥಮ, ಸೋಮಲಿಂಗ ಮತ್ತು ಮುತ್ತುರಾಜ್ ದ್ವಿತೀಯ, ಉಲ್ಲಾಸ್ ಮತ್ತು ಈರಣ್ಣ ತೃತೀಯ ಬಹುಮಾನ ಪಡೆದರು.
ಅಂಬೇಡ್ಕರ್ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಡಿ.ಆರ್.ನಿತಿನ್ ಕುಮಾರ್ ಪ್ರಥಮ, ಮಹಂತೇಶ ಎಮ್.ಡಿ ದ್ವಿತೀಯ, ಶ್ರೀಶೈಲ ಎಸ್ ಗಾಣಿಗೇರ ತೃತೀಯ ಬಹುಮಾನ ಪಡೆದರು.
ನಾಗರಾಜಪ್ರಭು, ಮುತ್ತುರಾಜ್, ಅಶ್ವಿನಿ, ರೋಹಿಣಿ ಆರ್.ಜಿ. ಅವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಶಯಗಳನ್ನು ವೈಯಕ್ತಿಕ ಜೀವನದಲ್ಲಿ ಸಾಕಾರಗೊಳಿಸಿಕೊಂಡ ತುಕ್ರಪ್ಪ ಕೆಂಬಾರೆ ಅವರನ್ನು ಶಾಲೆಯ ವತಿಯಿಂದ ಪ್ರಭಾರ ನಿಲಯ ಪಾಲಕರಾದ ರೋಹಿಣಿ ಆರ್.ಜಿ. ಅವರು ಸನ್ಮಾನಿಸಿದರು.ಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು.ಶೈಲಶ್ರೀ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಕೆ. ಆರ್. ಗೋಪಾಲಕೃಷ್ಣ, ಶುಭದಾ ಮತ್ತು ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಲಾಯಿತು.ಸುಗಮ ಸಂಗೀತ ತಂಡಕ್ಕೆ ಶಾಲೆಯ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.