Site icon Suddi Belthangady

ವಿಕಸಿತ ಭಾರತಕ್ಕೆ ವಿಶ್ವಾಸ ಮೂಡಿಸಿದ ಬಜೆಟ್: ಹರೀಶ್ ಪೂಂಜ

ಬೆಳ್ತಂಗಡಿ: ಸಂಸತ್ತಿನಲ್ಲಿ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೊನೆಯ ಮುಂಗಡ ಪತ್ರವನ್ನು ಮಂಡಿಸಿದ್ದು ವಿಕಸಿತ ಭಾರತ 2047 ನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಮುಂಗಡ ಪತ್ರವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತ ಪಡಿಸಿದ್ದಾರೆ.

ದೇಶದ 1 ಕೋಟಿ ಮನೆಗಳ ಮಾಳಿಗೆ ಮೇಲೆ ಸೋಲಾರ್ ಅಳವಡಿಕೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರ ಸ್ವಾವಲಂಬಿಯಾಗುವುದು ಮಾತ್ರವಲ್ಲದೆ, ಹೆಚ್ಚುವರಿ ವಿದ್ಯುತ್‌ ನ್ನು ಮಾರಾಟ ಮಾಡುವ ಅವಕಾಶದಿಂದ ಜನತೆಯಲ್ಲಿ ಜೀವನ ಮಟ್ಟ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ.ಆತ್ಮನಿರ್ಭರ ಆಯಿಲ್ ಸೀಡ್ ಯೋಜನೆಯಿಂದ ಜನತೆಗೆ ಅಡುಗೆ ತೈಲದ ಬೆಲೆಯೇರಿಕೆಯ ಬಿಸಿಯಿಂದ ಮುಕ್ತಿ ದೊರಕಲಿದೆ.

3 ಕೋಟಿ ಮನೆಗಳ ಗುರಿ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ 55 ಲಕ್ಷ ಉದ್ಯೋಗ ಸೃಷ್ಟಿ, ರೈಲ್ವೇ ಇಲಾಖೆಯಲ್ಲಿ ವಂದೇ ಭಾರತ್ ಯೋಜನೆಗೆ ಉತ್ತೇಜನ, ರಸ್ತೆ, ರೈಲು ವಿಮಾನಯಾನಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಯುಷ್ಕಾನ್ ಯೋಜನೆ ವಿಸ್ತರಣೆ, ಪ್ರವಾಸೋದ್ಯಮ ಹಾಗೂ ಕೃಷಿಗೆ ವೈಜ್ಞಾನಿಕ ಸ್ಪರ್ಶ ನಿಶ್ಚಿತವಾಗಿಯೂ ಸರ್ವಾಂಗೀಣ ಪ್ರಗತಿಯತ್ತ ದೇಶ ಮುನ್ನಡೆಯಲಿದೆ. ಯಾವುದೇ ಪೊಳ್ಳು ಭರವಸೆ ನೀಡದೆ ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಅಭ್ಯುದಯಕ್ಕೆ ಉತ್ತಮ ಕಾರ್ಯ ನಿರ್ವಹಿಸಿ, ನುಡಿದಂತೆ ನಡೆದ ಮೋದಿ ಸರ್ಕಾರ ವಿಕಸಿತ ಭಾರತಕ್ಕೆ ಜನತೆಗೆ ವಿಶ್ವಾಸಾರ್ಹ ಮುಂಗಡ ಪತ್ರವನ್ನು ನೀಡಿದೆಯೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version