Site icon Suddi Belthangady

ಗ್ರಾ.ಪಂ.ನಿಂದ ಭೂಕಬಳಿಕೆ ಆರೋಪ: ನೋಟಿಸ್‌ ಜಾರಿ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ನವೀನ್ ನಾಯ್ಕ ಅವರ ಭೂಮಿಯನ್ನು ತೆಕ್ಕಾರು ಗ್ರಾಮ ಪಂಚಾಯತ್‌ ನಿಂದ ಅಕ್ರಮವಾಗಿ ಕಬಳಿಸಲಾಗಿದೆ ಎಂಬ ದೂರಿನನ್ವಯ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಆಯೋಗವು ತೆಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಪಿಡಿಒ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖಾ ಕಿರಿಯ ಎಂಜಿನಿಯರ್‌ಗಳಿಗೆ ವಿಚಾರಣೆಗೆ ನೋಟಿಸ್ ಜಾರಿ ಮಾಡಿದೆ.

ನವೀನ್ ನಾಯ್ಕ ಅವರಿಗೆ ಮಂಜೂರಾಗಿರುವ ಸರ್ವೆ ನಂಬ್ರ 103/1ಎ2 ಮತ್ತು 64/1ಬಿ ರಲ್ಲಿ 0.69 ಮತ್ತು 0.95 ಎಕರೆ ಭೂಮಿಯಲ್ಲಿ ನೂತನ ಪಂಚಾಯತ್ ಕಚೇರಿಯನ್ನು ನಿರ್ಮಿಸಲು ಪಂಚಾಯತ್ ಆಡಳಿತವು ಮುಂದಾಗಿದ್ದು, ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಪಂಚಾಯತ್ ಕಟ್ಟಡವನ್ನು ನಿರ್ಮಿಸಲೆಂದು ಮೀಸಲಿಟ್ಟ ಭೂಮಿಯ ಬದಲಾಗಿ ನನ್ನ ಭೂಮಿಯನ್ನು ಕಬಳಿಸುವ ಸಲುವಾಗಿ ನನ್ನ ಹಕ್ಕಿನ ಭೂಮಿಯಲ್ಲಿ ಪಂಚಾಯತ್ ಕಟ್ಟಡವನ್ನು ನಿರ್ಮಿಸಲು ಮುಂದಾಗಿದ್ದಾರೆಂದು ತೆಕ್ಕಾರು ಗ್ರಾಮದ ಪಿಡಿಒ ಸುಮಯ್ಯ, ಕಿರಿಯ ಎಂಜಿನಿಯರ್ ಗಫೂರ್ ಸಾಬ್ ಮತ್ತು ಪಂಚಾಯತ್ ಅಧ್ಯಕ್ಷರ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿಗೆ ಸಂಬಂಧಿಸಿ ಆಯೋಗವು ವಿಚಾರಣೆ ನಡೆಸಲು ತೀರ್ಮಾನಿಸಿದ್ದು, ಹದಿನೈದು ದಿನಗಳ ಒಳಗಾಗಿ ಆಪಾದನೆಗಳ ಸಂಬಂಧ ಮೂಲ ಮಾಹಿತಿಗಳು ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಸಲ್ಲಿಸಲು ಸೂಚಿಸಿದೆ.

Exit mobile version