Site icon Suddi Belthangady

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಉಜಿರೆ: ರಕ್ತದಾನ ಮಾಡುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಏಕೆಂದರೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದ ಸ್ನಿಗ್ಧತೆಯನ್ನು ಕಡಿಮೆ ಮಾಡುತ್ತದೆ.ಹೆಚ್ಚಿನ ಸ್ನಿಗ್ಧತೆಯು ಹೃದಯಕ್ಕೆ ರಕ್ತದ ಹರಿವನ್ನು ಮಿತಿಗೊಳಿಸುತ್ತದೆ ಮತ್ತು ಅಂಗಾಂಗ ವೈಫಲ್ಯ ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಡಾ.ಸಾತ್ವಿಕ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್ ಸಿ ಸಿ ಯ 2/18 ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಮತ್ತು 5 ಕಾರ್ ನೌಕಾ ದಳವು ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಇದರ ಸಹಯಗದೊಂದಿಗೆ ಮಂಗಳವಾರ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು.ಕೆಡೆಟ್ ಗಳು ಸ್ವಯಂ ಸೇವಕರಾಗಿ ಹಾಜರಿದ್ದರು.

ಕಾಲೇಜಿನಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವುದು ನಿಜವಾಗಿಯೂ ಖುಷಿಯ ವಿಚಾರ.ಅಗತ್ಯವಿರುವವರಿಗೆ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ.ಓರ್ವ ದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು.ರಕ್ತದಾನ ಮಾಡುವುದರಿಂದ ಕೇವಲ ಸ್ವೀಕರಿಸಿದವರಿಗೆ ಮಾತ್ರ ಪ್ರಯೋಜನವಾಗುವುದಿಲ್ಲ, ರಕ್ತದಾನ ಮಾಡಿದವರಿಗೂ ಹೆಚ್ಚು ಸಹಾಯವಾಗುತ್ತದೆ ಎಂದು ಡಾ. ಬಿ. ಎ ಕುಮಾರ್ ಹೆಗ್ಡೆ ತಿಳಿಸಿದರು.

ಒಟ್ಟು 155 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು.ಲೆಫ್ಟನೆಂಟ್ ಭಾನುಪ್ರಕಾಶ್ ಬಿ.ಇ , ಲೆಫ್ಟಿನೆಂಟ್ ಶುಭರಣಿ ಪಿ.ಎಸ್ ಉಪಸ್ಥಿತರಿದ್ದರು.ಸಿ.ಪಿ.ಎಲ್ ಸಾಯಿ ಲೋಕೇಶ್ ಸ್ವಾಗತಿಸಿ, ಕೆಡೆಟ್ ಮೊನಾಲ್ ವಂದಿಸಿದರು ಮತ್ತು ಸಿ.ಪಿ.ಎಲ್ ಸೀಮಾ ಜಾಂಗಿರ್ ಕಾರ್ಯಕ್ರಮ ನಿರೂಪಿಸಿದರು.

Exit mobile version