ಮೊಗ್ರು: ಇಲ್ಲಿನ ಲಕ್ಷ್ಮಿ ನಾರಾಯಣ ಭಜನಾ ಮಂದಿರ (ರಿ), ಮತ್ತು ಎಲ್.ಎನ್. ಫ್ರೆಂಡ್ಸ್ ಊಂತನಾಜೆ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸಹಯೋಗದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ‘ಎಲ್.ಎನ್. ಟ್ರೋಫಿ-2024’ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ವಠಾರದಲ್ಲಿ ಜ.28ರಂದು ನಡೆಯಿತು.
ಊಂತನಾಜೆ ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಅಧ್ಯಕ್ಷ ಸಂಕಪ್ಪ ಗೌಡ ಉಪ್ಪ ಅವರು ಪಂದ್ಯಾಟವನ್ನು ಉದ್ಘಾಟಿಸಿದರು.ಸಂಜೆ ನೆರವೇರಿದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ವಹಿಸಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಪ್ರಗತಿಪರ ಕೃಷಿಕರಾದ ಪ್ರಭಾಕರ ಗೌಡ ಗುತ್ಯೋಡಿ, ಧರ್ಣಪ್ಪ ಗೌಡ ಅತ್ಯರಕಂಡ, ಬಾಬು ಬೆಲ್ಚಾಡ ಊಂತನಾಜೆ, ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಅಧ್ಯಕ್ಷ ಸಂಕಪ್ಪ ಗೌಡ, ಮಾಜಿ ಅಧ್ಯಕ್ಷ ಶಿವಣ್ಣ ಗೌಡ ಪರಪ್ಪಾದೆ ಉಪಸ್ಥಿತರಿದ್ದರು.
ಅತಿಥಿಗಳಾಗಿ ವೇದಿಕೆಯಲ್ಲಿದ್ದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಚುಶ್ರೀ ಬಾಂಗೇರು ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯೆ ಮಂಜುಶ್ರೀ ಊಂತನಾಜೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ಎಲ್.ಎನ್.ಫ್ರೆಂಡ್ಸ್ ಊಂತನಾಜೆ ಇದರ ಅಧ್ಯಕ್ಷ ನಿತಿನ್ ಕುಮಾರ್ ಊಂತನಾಜೆ, ಕಾರ್ಯದರ್ಶಿ ವಿನಿತ್ ಕುಮಾರ್ ಊಂತನಾಜೆ, ಲಕ್ಷ್ಮಿ ನಾರಾಯಣ ಭಜನಾ ಮಂದಿರದ ಕಾರ್ಯದರ್ಶಿ ಗಂಗಾಧರ ಗೌಡ ದಂಡುಗ
ಉಪಸ್ಥಿತರಿದ್ದರು.
ಪ್ರವೀಣ್ ಕೊಯ್ಯೂರು ಹಾಗೂ ಕೇವನ್ ತೀರ್ಪುಗಾರರಾಗಿ ಪಂದ್ಯಾಟವನ್ನು ಮುನ್ನಡೆಸಿದರು.
ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.