ಮರೋಡಿ: ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು 2024ರ ಏ.7ರಿಂದ 12ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.
ಮರೋಡಿ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯ ಸಂದರ್ಭದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾರಾವಿ ವಿಭಾಗ ಇದರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮರೋಡಿ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದೇವಸ್ಥಾನದ ವಠಾರದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಕ್ತ ಸಮುದಾಯದ ಸಹಕಾರದಲ್ಲಿ ಜೀರ್ಣೋದ್ಧಾರದೊಂಡ ದೇವಸ್ಥಾನದಲ್ಲಿ 2012ರಲ್ಲಿ ಸಂಭ್ರಮದಿಂದ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶದ ಸುಸಂದರ್ಭ ಎದುರಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಭಕ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಮಾತನಾಡಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಿಂದ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹೆಚ್ಚಾಗಿದೆ ಎಂದು ಹೇಳಿದರು.ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಮಾತನಾಡಿ, ದೇವಸ್ಥಾನ ಮತ್ತು ಶಾಲೆಗಳು ಗ್ರಾಮದ ಅಭಿವೃದ್ಧಿಯ ಸಂಕೇತ. ಇವುಗಳ ಅಭಿವೃದ್ಧಿಯಿಂದ ರಾಮರಾಜ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕ್ಷೇತ್ರಕ್ಕೆ ವಿವಿಧ ಕೊಡುಗೆ ನೀಡಿದ ರವೀಂದ್ರ ಹೆಗ್ಡೆ ಉಚ್ಚೂರು ದಂಪತಿ, ಸುರೇಂದ್ರ ಪೂಜಾರಿ ಉಚ್ಚೂರುಪಲ್ಕೆ, ಶಾಂಭವಿ ಹೆಗ್ಡೆ ಹಾಗೂ ಶಿವಣ್ಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಆಡಳಿತ ಮಂಡಳಿ ಸದಸ್ಯ ವಿಜಯ ಆರಿಗ ನಿಡ್ಡಾಜೆ, ಮರೋಡಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ಸೌಮ್ಯಾ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಸಂತೋಷ್ ಪೂಜಾರಿ ಇದ್ದರು.ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಶುಭರಾಜ್ ಹೆಗ್ಡೆ ಸ್ವಾಗತಿಸಿದರು.
ಪೂಜಾ ಸಮಿತಿಯ ಮಾಜಿ ಅಧ್ಯಕ್ಷ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿಗಳಾದ ಶಶಿಕಲಾ, ಹರಿಣಾಕ್ಷಿ ಉಪಸ್ಥಿತರಿದ್ದರು.