Site icon Suddi Belthangady

ಗುರುದೇವ ಕಾಲೇಜಿನಲ್ಲಿ ವಿಚಾರ ಸಂಕೀರಣ

ಬೆಳ್ತಂಗಡಿ: ‘ಹೆಣ್ಣನ್ನು ಅಡವಿಡುವ, ಗುರುದಕ್ಷಿಣೆಯಾಗಿ ಹೆಬ್ಬರಲನ್ನೇ ಕತ್ತರಿಸಿ ಕೊಡುವ ಪಾಳೇಗಾರಿ ಸಂಸ್ಕೃತಿಯಿದ್ದ ಭಾರತದಲ್ಲಿ ಅಂತಹ ಹಿಂಸಾತ್ಮಕ ಕ್ರಮವನ್ನು ಪ್ರತಿಭಟಿಸಿ, ಹೆಣ್ಣನ್ನೂ ದೇಶದ ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾಗುವಂತೆ ಮಾಡಿದ್ದು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವಾಗಿದೆ.ಹಾಗಾಗಿ ನಮ್ಮ ಸಂವಿಧಾನವನ್ನು ಬಹಳ ಎಚ್ಚರಿಕೆಯಿಂದ ಕಾಪಾಡಬೇಕಾದ ಅಗತ್ಯವಿದೆ’ ಎಂದು ಖ್ಯಾತ ವಕೀಲ ಸುಧೀರ್ ಕುಮಾರ್ ಮರೋಳ್ಳಿ ಹೇಳಿದರು.

ಅವರು ಜ.26ರಂದು ಡಿ.ವೈ.ಎಫ್.ಐ. 12 ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಮತ್ತು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲ್ಲೂಕು ಸಮಿತಿ ಜಂಟಿ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಪಾಳೇಗಾರಿ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು ಎಂಬ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.

ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇಲವ ಪ್ರಧಾನಿ, ಮುಖ್ಯಮಂತ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಮಾಡುವುದಕ್ಕಲ್ಲ.ಬದಲಾಗಿ ಪ್ರತಿಯೊಬ್ಬರೂ ತನ್ನ ನಿಜವಾದ ಹಕ್ಕನ್ನು ಪಡೆದು ನೆಮ್ಮದಿಯ ಬದುಕನ್ನು ಕಾಣುವುದಕ್ಕಾಗಿ.ಯಾರನ್ನೋ ಪ್ರಧಾನಿ, ಮುಖ್ಯಮಂತ್ರಿ ಮಾಡಿ ಅವರಿಗೆ ಶರಣಾಗುವ ಸಂಸ್ಕೃತಿ ಬೆಳೆಸಿಕೊಂಡರೆ ನಾವು ಪಡೆದ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ಎಂದರು.ಕುವೆಂಪು ಕೊಟ್ಟ ನಾಡಗೀತೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ, ಬಹುತ್ವ ರಾಷ್ಟ್ರವನ್ನು ಕೊಂಡಾಡಿದ್ದಾರೆ.ಬಹು ಸಂಸ್ಕೃತಿ, ಬಹು ನಂಬಿಕೆ, ಬಹು ಆಚರಣಾ ಪದ್ಧತಿಯಿರುವ ಶ್ರೇಷ್ಠ ನೆಲ ಎಂದು ಕೊಂಡಾಡಿದ್ದಾರೆ.ಅದು ಹಾಗೆಯೇ ಇರಬೇಕು ಎಂದು ಅವರು ಹಾಡುತ್ತಿರುವುದು ಎಂದರು.

ಡಿ.ವೈ.ಎಫ್.ಐ. ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಬೆಳ್ತಂಗಡಿ ಎಂಬುದು ಪಾಲೇಗಾರಿ ಮೌಲ್ಯಗಳ ದೊಡ್ಡ ಕೇಂದ್ರವಾಗಿದೆ.ಇಲ್ಲಿ ಪಾಳೇಗಾರಿ ಶೋಷಣೆಗಳು ಇಂದಿಗೂ ನಡೆಯುತ್ತಿರುವುದು ಈ ಪ್ರಜಾಪ್ರಭುತ್ವ ರಾಷ್ಟ್ರದ ದುರಂತವಾಗಿದೆ.ಇಂದು ವಿಧಾನ ಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆಗಳಿಗೆ ಯಾರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದೇವೆ ಎಂಬ ಎಚ್ಚರಿಕೆ ನಮ್ಮೊಳಗಿರಬೇಕು.ಈ ದೇಶಕ್ಕೆ ಸ್ವಾಂತಂತ್ರ್ಯ ಸಿಕ್ಕಿದ್ದು ಕೇವಲ ಬ್ರಿಟಿಷರನ್ನು ಓಡಿಸುವುದರಲ್ಲಿ ಅಲ್ಲ.ಬದಲಾಗಿ ನಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಮತ್ತು ಪ್ರಶ್ನಿಸುವಲ್ಲಿ ಎಂಬುದನ್ನು ಅರ್ಥೈಸಿಕೊಳ್ಳಬೇಕು.ಆ ಮೂಲಕ ಪಾಳೇಗಾರಿ ವ್ಯವಸ್ಥೆಯ ವಿರುದ್ಧ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಮಿಕ ಮುಖಂಡ ಬಿ.ಎಂ.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ವಿಠಲ ಮಲೆಕುಡಿಯ, ಎಸ್.ಎಫ್.ಐ. ಜಿಲ್ಲಾ ಸಹ ಕಾರ್ಯದರ್ಶಿ ವಿನುಶರಮಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಸಮುದಾಯ ಸಾಮರಸ್ಯ ಸಂಘಟನೆಯ ಸದಸ್ಯರಿಂದ ಸಂವಿಧಾನ ಪೀಠಿಕೆ, 1 ನೇ ತರಗತಿ ಬಾಲಕಿ ಆದಿತ್ರಿ ಆಚಾರ್ಯ ದೇಶಭಕ್ತಿ ಗೀತೆ ಹಾಡಿದರು.

ವಕೀಲ ಮನೋಹರ್ ಇಳಂತಿಲ ಸ್ವಾಗತಿಸಿದರು.ಉಪನ್ಯಾಸಕರಾದ ರಾಕೇಶ್ ಕುಮಾರ್ ಹಾಗೂ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎ. ಸಮೀವುಲ್ಲಾ ವಂದಿಸಿದರು.

Exit mobile version