Site icon Suddi Belthangady

ದೆಹಲಿಯ ಗಣರಾಜ್ಯೋತ್ಸವ: ಉಜಿರೆ ಎಸ್.ಡಿ.ಎಂ ಎನ್.ಸಿ.ಸಿಯ 3 ಕೆಡೆಟ್‌ಗಳ ಆಯ್ಕೆ

ಉಜಿರೆ: 75ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಮೂರು ಎನ್‌ಸಿಸಿ ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವದ ಪಥಸಂಚಲನ, ಗಾರ್ಡ್‌ಆಫ್ ಹಾನರ್, ಪ್ರಧಾನ ಮಂತ್ರಿ ರ‍್ಯಾಲಿಯ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ತಂಡಗಳಲ್ಲಿ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಪ್ರಾಶಸ್ಯ ಪಡೆದಿದ್ದು. ನೇವಲ್ ವಿಭಾಗದಿಂದ ಕೆಡೆಟ್‌ ತರುಣ್‌ ಎಸ್, ಆರ್ಮಿ ವಿಭಾಗದಿಂದ ಕೆಡೆಟ್‌ ಉದೀತ್‌ ಯು.ವಿ ಹಾಗು ಕೆಡೆಟ್‌ ರಾಧಿಕಾ ಸಿ.ಎಸ್‌ ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶಕ್ಕಾಗಿ ಎನ್‌ಸಿಸಿ ಕೆಡೆಟ್‌ಗಳನ್ನು ಆಯ್ಕೆ ಮಾಡಲು ರಾಜ್ಯದ ವಿವಿಧ ಭಾಗಗಳ್ಲಲಿ ಕ್ಯಾಂಪ್‌ ನಡೆಸಲಾಗಿತ್ತು.

ತದನಂತರ ಬೆಂಗಳೂರಿನಲ್ಲಿ ಐಜಿಸಿ ಶಿಬಿರ ಮತ್ತು ಮೂರು ಪ್ರಿ ಆರ್ ಡಿಸಿ ಮತ್ತು ಕೊನೆಯಲ್ಲಿ ಕಿಟಿಂಗ್‌ ಕ್ಯಾಂಪ್ ಸೇರಿದಂತೆ ಒಟ್ಟು ಎಂಟು ಬಗೆಯ ಕಠಿಣ ಆಯ್ಕೆ ಪ್ರಕ್ರಿಯೆಯ ಶಿಬಿರಗಳನ್ನು ನಡೆಸಲಾಗಿತ್ತು. ಈ ಶಿಬಿರಗಳ ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಕಾಲೇಜಿನ ಎನ್‌ಸಿಸಿ ವಿಭಾಗದ ಒಟ್ಟು 3 ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ದೆಹಲಿಯಲ್ಲಿ ಆಯೋಜಿತವಾಗುವ ಗಣರಾಜ್ಯೋತ್ಸವದ ಪಥಸಂಚಲನ ಕಾರ್ಯಕ್ರಮಕ್ಕಾಗಿ ಕಾಲೇಜಿನ ಕೆಡೆಟ್‌ಗಳು ನಿಯೋಜಿತರಾಗಿರುವುದು ವಿಶೇಷ.ಈವರೆಗೆ ಕಾಲೇಜಿನ ನೆವಲ್ ಹಾಗು ಆರ್ಮಿ ವಿಭಾಗದಿಂದ ಒಟ್ಟು 50ಕ್ಕೂ ಹೆಚ್ಚು ಕೆಡೆಟ್ ಗಳು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಎಸ್.ಡಿ.ಎಂ ಕಾಲೇಜಿನ ನೌಕಾ ವಿಭಾಗದ ಎನ್.ಸಿ.ಸಿ ಹಿರಿಯ ಅಧಿಕಾರಿ ಲೆಫ್ಟಿನೆಂಟ್‌ ಕಮಾಂಡರ್‌ ಡಾ. ಶ್ರೀಧರ್ ಭಟ್, ಕೇರ್‌ ಟೇಕರ್ ಹರೀಶ ಶೆಟ್ಟಿ ,ಆರ್ಮಿ ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್ ಮತ್ತು ಲೆಫ್ಟಿನೆಂಟ್ ಶುಭಾರಾಣಿ ಹಾಗೂ ಹಿರಿಯ ಎನ್.ಸಿ.ಸಿ ಕೆಡೆಟ್‌ಗಳು ತರಬೇತಿ ನೀಡಿದ್ದರು.

Exit mobile version