Site icon Suddi Belthangady

ಬೆಳ್ತಂಗಡಿ: ಡಯಾಲಿಸಿಸ್ ಹೊಸ ಯಂತ್ರ ಅಳವಡಿಕೆಯಿಂದ ಉತ್ತಮ ಚಿಕಿತ್ಸೆ

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಡಯಾಲಿಸಿಸ್ ಕೇಂದ್ರದಲ್ಲಿ ಹಳೆಯ ಯಂತ್ರಗಳನ್ನು ಬಳಸುತ್ತಿದ್ದುದಲ್ಲದೆ, ಸಮರ್ಪಕವಾದ ಚಿಕಿತ್ಸೆಯಿಲ್ಲದೆ ಹಲವಾರು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.ಇದೀಗ ನಮ್ಮ ಮನವಿಗೆ ಮಾಜಿ ಶಾಸಕ ವಸಂತ ಬಂಗೇರ ಅವರ ಶ್ರಮದಿಂದ ಹದಿನಾರು ಹೊಸ ಯಂತ್ರಗಳು ಬಂದಿದ್ದು, ಇದರಿಂದ ಉತ್ತಮ ಚಿಕಿತ್ಸೆ ಸಿಗುತ್ತಿದೆ.ಇದಕ್ಕೆ ಮಾಜಿ ಶಾಸಕ ವಸಂತ ಬಂಗೇರರವರಿಗೆ ಋಣಿಯಾಗಿದ್ದೇವೆ ಎಂದು ಚಿಕಿತ್ಸೆ ಪಡೆಯುತ್ತಿರುವ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪುರಂದರ ದಾಸ್ ಹೇಳಿದರು.

ಅವರು ಜ.24ರಂದು ಪ್ರವಾಸಿಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಿಂದೆ ಎಜೆನ್ಸಿ ಪಡೆದವರು ಉಡಾಫೆಯಾಗಿ ವರ್ತಿಸುತ್ತಿದ್ದುದಲ್ಲದೆ, ರೋಗಿಗಳಿಗೆ ಸರಿಯಾಗಿ ಸ್ಪಂದಿಸದೆ ಕೆಲವು ಔಷಧಿಗಳನ್ನು ಹೊರಗಿನಿಂದ ತರಿಸುತ್ತಿದ್ದರು ಮತ್ತು ರಕ್ತ ಪರೀಕ್ಷೆಯು ಹೊರಗೆ ಮಾಡಿಸುತ್ತಿದ್ದರು.ಇದಕ್ಕೆ ತಿಂಗಳಿಗೆ ಒಬ್ಬೊಬ್ಬರಿಗೆ 15 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತಿದ್ದು, ಈಗ ಎಲ್ಲವೂ ಉಚಿತವಾಗಿ ನಡೆಯುತ್ತಿದ್ದು ಇದರಿಂದ ನೆಮ್ಮದಿ ತಂದಿದೆ.

ಹಿಂದೆ ಹಳೇ ಯಂತ್ರಗಳ ಬಳಕೆಯಿಂದ ಹೆಚ್.ಸಿ.ವಿ ಎಂಬ ವೈರಸ್ ಕಾಯಿಲೆ ಸುಮಾರು 20 ಡಯಾಲಿಸಿಸ್ ರೋಗಿಗಳಿಗೆ ತಗುಲಿದ್ದು ಇದಕ್ಕೆ ಹೆಚ್ಚುವರಿ ಔಷಧಿ ಪಡೆಯಬೇಕಾಗಿದ್ದು ಇದಕ್ಕೆ ತಿಂಗಳಿಗೆ 17 ಸಾವಿರ ಖರ್ಚಾಗುತ್ತದೆ.ಇದಕ್ಕೆ ಮಾಜಿ ಶಾಸಕ ವಸಂತ ಬಂಗೇರರ ಪ್ರಯತ್ನದಿಂದ ಉಚಿತವಾಗಿ ಔಷಧಿಗಳನ್ನು ನೀಡಿದ್ದಾರೆ.ಈಗ ಈ ವೈರಸ್ ತಗುಲಿದ ರೋಗಿಗಳಿಗೆ ಪ್ರತ್ಯೇಕ ಮಿಷನ್ ಗಳಿಂದ ಚಿಕಿತ್ಸೆ ನೀಡುತ್ತಿದ್ದು ಇದರಿಂದ ಇನ್ನು ವೈರಸ್ ಹರಡದಂತೆ ಇದು ಸಹಕಾರಿಯಾಗಲಿದೆ ಎಂದರು.

ನಮ್ಮ ನೋವಿಗೆ ಸ್ಪಂದಿಸಿದ ಮಾಜಿ ಶಾಸಕರನ್ನು ನಾವು ಸಣ್ಣ ರೀತಿಯಲ್ಲಿ ಅಭಿನಂದಿಸಬೇಕು ಎಂದು ವಿನಂತಿಸಿದಾಗ ಇದನ್ನು ನಿರಾಕರಿಸಿದ್ದು ಶಾಸಕರು ತಾಲೂಕಿನಲ್ಲಿರುವಾಗ ನನ್ನನ್ನು ಸನ್ಮಾನಿಸುವುದು ಸರಿಯಲ್ಲ. ಇದು ಶಾಸಕರಿಗೆ ಅವಮಾನ ಮಾಡಿದಂತೆ ಆಗಬಹುದು.ನೀವು ಆರೋಗ್ಯದಿಂದ ಇದ್ದರೆ ಸಾಕು ಎಂದು ಹೇಳಿದ್ದು ಇದು ಅವರ ಮಾನವೀಯತೆಯನ್ನು ತೋರಿಸುತ್ತದೆ.ಎಲ್ಲಾ ಡಯಾಲಿಸಿಸ್ ರೋಗಿಗಳ ಪರವಾಗಿ ಮಾಜಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಮತ್ತು ಸರಕಾರಕ್ಕೆ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಡಯಾಲಿಸಿಸ್ ರೋಗಿಗಳ ಕುಟುಂಬಸ್ಥರಾದ ಗಾಯತ್ರಿ, ಕೌಕ್ರಾಡಿಯ ಪುಷ್ಪ ಉಪಸ್ಥಿತರಿದ್ದರು.

Exit mobile version