Site icon Suddi Belthangady

ಕೂಕ್ರಬೆಟ್ಟು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಲೋಕಾರ್ಪಣೆ

ಬೆಳ್ತಂಗಡಿ: ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ₹ 2.40 ಲಕ್ಷ ವೆಚ್ಚದಲ್ಲಿ ಕಲ್ಪಿಸಲಾದ ಸ್ಮಾರ್ಟ್‌ ಕ್ಲಾಸ್‌ (ಡಿಜಿಟಲ್‌ ತರಗತಿ) ಸೌಲಭ್ಯವನ್ನು ಜ.18ರಂದು ಲೋಕಾರ್ಪಣೆ ಮಾಡಲಾಯಿತು.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಐಇಇಇ ಅಡ್ವಾನ್ಸಿಂಗ್‌ ಟೆಕ್ನಾಲಜಿ ಫಾರ್‌ ಹ್ಯೂಮಾನಿಟಿ ಸಂಸ್ಥೆಯಿಂದ ನಿರ್ಮಿಸಲಾದ ಸ್ಮಾರ್ಟ್‌ ಕ್ಲಾಸ್‌ ಅನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಐಇಇಇ ಸಂಸ್ಥೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಾಗೂ ಬೆಳ್ತಂಗಡಿ ತಾಲ್ಲೂಕಿನ ಒಂದು ಶಾಲೆಯನ್ನು ಸ್ಮಾರ್ಟ್‌ ಕ್ಲಾಸ್‌ ಯೋಜನೆಗೆ ಆಯ್ಕೆ ಮಾಡಿ, ಸೌಲಭ್ಯ ಕಲ್ಪಿಸಿದೆ. ಡಿಜಿಟಲ್‌ ತರಗತಿಯ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಇದು ಪೂರಕವಾಗಿದೆ. ಹಳ್ಳಿಯ ವಿದ್ಯಾರ್ಥಿಗಳು ಸಹ ಉತ್ತಮ ಅಂಕ ಪಡೆದು ಸಾಧನೆಯತ್ತ ದೃಢ ಹೆಜ್ಜೆ ಇಡಲು ಈ ಸೌಲಭ್ಯ ಕಲ್ಪಿಸಲಾಗಿದೆ. ಪೂರ್ಣಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಫೆ.17ರಂದು ಶಾಲಾ ಕಟ್ಟಡ ಲೋಕಾರ್ಪಣೆ: ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್‌ ಮಾತನಾಡಿ, 2019ರಲ್ಲಿ 16 ಮಕ್ಕಳಿದ್ದು, ಮುಚ್ಚುವ ಹಂತದಲ್ಲಿದ್ದ ನಮ್ಮ ಶಾಲೆಯನ್ನು ಪ್ರಕಾಶ್‌ ಅಂಚನ್‌ ಸಾರಥ್ಯದ ದಡ್ಡಲಕಾಡು ಶ್ರೀ ದುರ್ಗಾ ಚಾರಿಟಬಲ್‌ ಟ್ರಸ್ಟ್‌ ದತ್ತು ಪಡೆದಿದೆ. ಎಲ್ಲರ ಪ್ರಯತ್ನದ ಫಲವಾಗಿ ಇಂದು 180ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಸಕ ಹರೀಶ್‌ ಪೂಂಜ ಅವರ ವಿಶೇಷ ಮುತುವರ್ಜಿಯಿಂದ ಶಾಲೆಗೆ ಸುಮಾರು 1 ಕೋಟಿ ರೂಪಾಯಿಯ ಸುಸಜ್ಜಿತ ಕಟ್ಟಡ ದೊರಕಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಫೆಬ್ರುವರಿ 17ರಂದು ಈ ಸುಸಜ್ಜಿತ ಕಟ್ಟಡದ ಲೋಕಾರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ದೊರಕಿರುವುದು ಖುಷಿ ತಂದಿದೆ ಎಂದು ಹೇಳಿದರು.

ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್‌ ಅಧ್ಯಕ್ಷತೆ ವಹಿಸಿ, ಕೂಕ್ರಬೆಟ್ಟು ಶಾಲೆಯು ಮಾದರಿಯಾಗಿ ಬೆಳೆಯುತ್ತಿದ್ದು, ಇದರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಯಶೋಧರ ಬಂಗೇರ, ಉಪಾಧ್ಯಕ್ಷ ಯೋಗೇಂದ್ರ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್‌ ಪೂಜಾರಿ, ಐಇಇಇ ಸಂಸ್ಥೆಯ ಪಾಲುದಾರ ಅಶೋಕ್‌, ಸಹ ಸಂಯೋಜಕ ಸ್ವರಾಜ್‌, ಪೋಷಕರಾದ ಸುರೇಂದ್ರ ಸಾಲ್ಯಾನ್‌, ತಾಯಂದಿರ ಸಮಿತಿ ಅಧ್ಯಕ್ಷೆ ಸುರೇಖಾ ಹೆಗ್ಡೆ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ಸುಫಲಾ ಸ್ವಾಗತಿಸಿದರು. ಸಹ ಶಿಕ್ಷಕಿ ಶುಭಶ್ರೀ ಕಾರ್ಯಕ್ರಮ ನಿರೂಪಿಸಿದರು.ಸಹ ಶಿಕ್ಷಕಿ ಸುಚಿತ್ರ ಧನ್ಯವಾದವಿತ್ತರು.ವಿವಿಧ ಸಮಿತಿಗಳ ಪದಾಧಿಕಾರಿಗಳು, ಶಿಕ್ಷಕರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಇದ್ದರು.

Exit mobile version