Site icon Suddi Belthangady

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ತಳಮಟ್ಟದಿಂದಲೇ ಪಕ್ಷ ಸಂಘಟನೆ-ಕೆ.ಆರ್.ಎಸ್ ಪಕ್ಷದ ನಾಯಕರ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಮುಂದೆ ಬರುವ ಲೋಕಸಭಾ ಚುನಾವಣೆ ಹಾಗೂ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಹಾಗೂ ವ್ಯವಸ್ಥೆಯಲ್ಲಿನ ಅಕ್ರಮ, ಅನಾಚಾರ, ದೌರ್ಜನ್ಯ ಹಾಗು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಲು ಪಕ್ಷವನ್ನು ತಳಮಟ್ಟದಿಂದಲೇ ಕಟ್ಟಲಾಗುತ್ತಿದೆ.ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ರಚನೆ ನಡೆಯುತ್ತಿದ್ದು ನೂತನ ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಚಿಸಲಾಗಿರುವುದಾಗಿ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.

ಬೆಳ್ತಂಗಡಿಯಲ್ಲಿ ಜ.19ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಪಕ್ಷದ ನೂತನ ತಾಲೂಕು ಅಧ್ಯಕ್ಷರಾಗಿ ಹರೀಶ್ ಅವರನ್ನು ಜಿಲ್ಲಾ ಸಮಿತಿಯು ಮಾಡಿದೆ ಎಂದ ಅವರು.ಯು.ಕೆ.ಮಹಮ್ಮದ್ ಸಲೀಂ ಉರುವಾಲಪದವು ಅವರನ್ನು ಉಪಾಧ್ಯಕ್ಷರನ್ನಾಗಿ, ನೌಫಲ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ವೆಂಕಪ್ಪ ಗೌಡ, ಗಣೇಶ್, ಕಾಸಿಂ.ಕೆ, ನಿಜಾಮ್, ಮಂಜು, ಮೊಹಮ್ಮದ್ ಅಶ್ರಫ್, ರಮೇಶ್, ನರೇಂದ್ರ ಮತ್ತು ಮೂಸ ಅವರುಗಳನ್ನು ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿರುವುದಾಗಿ ಅವರು ತಿಳಿಸಿದರು.

ತಾಲೂಕು ಸಮಿತಿಯು ಪಕ್ಷದ ಧ್ಯೇಯ-ಉದ್ದೇಶಗಳಿಗೆ ಮತ್ತು ನಿಯಮಗಳ ಅಡಿಯಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಮತ್ತು ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ತಳ ಮಟ್ಟದಿಂದಲೇ ಪಕ್ಷವನ್ನು ಕಟ್ಟುವ ಕಾರ್ಯವನ್ನು ಮಾಡುವುದಾಗಿ ಅವರು ತಿಳಿಸಿದರು.ಕೆ ಆರ್ ಎಸ್ ಪಕ್ಷದ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪಕ್ಷದ ಮುಖಂಡರುಗಳನ್ನು ಸಂಪರ್ಕಿಸುವ ಮೂಲಕ ಪಕ್ಷದ ಅಭಿಯಾನದ ಯಶಸ್ವಿಗೆ ಸಹಕರಿಸುವಂತೆ ಅವರು ವಿನಂತಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಈ ನಿಟ್ಟಿನಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದೆ.ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಸಕ್ತಿಯಿರುವ ಆಕಾಂಕ್ಷಿಗಳಿಗೆ ಸಂದರ್ಶನವನ್ನು ನಡೆಸಲಾಗುತ್ತಿದೆ.ಇದೇ 21ಭಾನುವಾರದಂದು ಎರಡನೇ ಸುತ್ತಿನ ಸಂದರ್ಶನವನ್ನು ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ನಡೆಸಲಾಗುತ್ತಿದೆ.

ಫೆ.19 ರಿಂದ ಮಾ.2ರ ವರೆಗೆ ಪಕ್ಷದ ವತಿಯಿಂದ ಕರ್ನಾಟಕಕ್ಕಾಗಿ ನಾವು ಎಂಬ ಹೆಸರಿನೊಂದಿಗೆ ಬೈಕ್ ಜಾಥಾವನ್ನು ಆಯೋಜಿಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಹರೀಶ್, ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ನೌಫಾಲ್ ಅಬ್ಬಾಸ್, ಕಾರ್ಯದರ್ಶಿ ಮೂಸಕುಂಞಿ, ಮುಖಂಡರುಗಳಾದ ರಮೇಶ್, ವೆಂಕಪ್ಪ ಗೌಡ, ಕುಮಾರ್, ಮಂಜುನಾಥ್, ರಾಘವೇಂದ್ರ, ನರೇಂದ್ರ ಉಪಸ್ಥಿತರಿದ್ದರು.

Exit mobile version