Site icon Suddi Belthangady

ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ರದ್ದು

ಕೊಕ್ಕಡ: ರಸ್ತೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆದು ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ರದ್ದುಗೊಂಡ ಘಟನೆ ನಡೆದಿದೆ.

ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ಬೇಬಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು.ಉಪಾಧ್ಯಕ್ಷ ಪ್ರಭಾಕರ ಗೌಡ ಸಹಿತ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಚ್ಚಾ ರಸ್ತೆಗಳ ದುರಸ್ತಿಗಾಗಿ ನವಂಬರ್ ತಿಂಗಳಿನಿಂದ ಪ್ರತಿ ತಿಂಗಳು ನಿರ್ಣಯ ಕೈಗೊಂಡರೂ ಈವರೆಗೆ ಅನುಷ್ಠಾನ ಆಗಿಲ್ಲ ಎಂದು ನಿಕಟ ಪೂರ್ವ ಅಧ್ಯಕ್ಷರಾದ ಹಾಲಿ ಸದಸ್ಯ ಯೋಗೀಶ್ ಅಲಂಬಿಲರವರು ಅಧ್ಯಕ್ಷರಲ್ಲಿ ಪ್ರಶ್ನೆ ಮಾಡಿದಾಗ ಎಲ್ಲಾ ಸದಸ್ಯರು ಗ್ರಾಮದ ಕಚ್ಚಾ ರಸ್ತೆಗಳು ದುರಸ್ಥಿಗೊಳಿಸದೇ ಇನ್ನೂ ದಿನ ದೂಡುತ್ತಿದ್ದಾರೆ.ಜನರಿಗೆ ಸಂಚಾರಕ್ಕೆ ಅನಾನುಕೂಲ ಆಗುತ್ತಿದೆ. ಬೇಸಿಗೆ ಮುಗಿದು ಇನ್ನು 2 ತಿಂಗಳಲ್ಲಿ ಮತ್ತೆ ಮಳೆ ಬರುತ್ತದೆ. ಪಂಚಾಯತ್ ದುಡ್ಡು ಹಾಳು ಮಾಡಲು ನಾವು ರೆಡಿ ಇಲ್ಲ. ವಾರದೊಳಗೆ ಎಲ್ಲಾ ರಸ್ತೆ ದುರಸ್ಥಿ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಪಿಡಿಒ ದೀಪಕ್‌ರಾಜ್‌ರವರಿಗೆ ಹೇಳಿದರು.ವಾರದೊಳಗೆ ಸಾಧ್ಯ ಇಲ್ಲ ಎಂದು ಪಿಡಿಓ ಉತ್ತರಿಸಿದಾಗ ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಎಲ್ಲಾ ಸದಸ್ಯರು ಈ ಕಾಮಗಾರಿಗಳು ಆಗದೆ ಸಾಮಾನ್ಯ ಸಭೆ ಬೇಡ ಎಂದು ಹೇಳಿ ಸಭೆ ಬಹಿಷ್ಕರಿಸಿದರು.

ಇದರಿಂದಾಗಿ ಗ್ರಾ.ಪಂ. ಸಾಮಾನ್ಯ ಸಭೆ ರದ್ದುಗೊಂಡಿತು.

Exit mobile version