Site icon Suddi Belthangady

ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

ಉಜಿರೆ: ಮದ್ದಡ್ಕದಲ್ಲಿರುವ ಬ್ರೆಂಟ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ವಿಕಲಚೇತನರಿಗೆ ಆರ್ಥಿಕಸಾಕ್ಷರತೆ, ಸ್ವಯಂಉದ್ಯೋಗ, ಕಂಪ್ಯೂಟರ್ ತರಬೇತಿ, ಉದ್ಯಮಶೀಲತಾಭಿವೃದ್ಧಿ ಮೊದಲಾದ ವಿಷಯಗಳಲ್ಲಿ ತರಬೇತಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡಲಾಗುತ್ತದೆ ಎಂದು ಸಂಸ್ಥೆಯ ಕೋಶಾಧಿಕಾರಿ ಶಿಶುಪಾಲ ಪೂವಣಿ ಹೇಳಿದರು.ಅವರು ಜ.16ರಂದು ಉಜಿರೆಯಲ್ಲಿ ಜನಜಾಗೃತಿಸೌಧದಲ್ಲಿ 35 ಮಂದಿ ವಿಕಲಚೇತನರಿಗೆ 1,65,000ರೂ. ಮೌಲ್ಯದ ಸಾಧನಾಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ ವಿಕಲಚೇತನರಿಗೆ ಗಾಲಿಕುರ್ಚಿ, ಶ್ರವಣಸಾಧನ, ಊರುಗೋಲು, ವಾಟರ್‌ಬೆಡ್ ಮೊದಲಾದ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.

ಇಂದಬೆಟ್ಟು ಗ್ರಾಮದ ಫಲಾನುಭವಿ ಜೋಸೆಫ್ ಮಾತನಾಡಿ ವಿಕಲಚೇತನರು ತಮಗೆ ಸಿಗುವ ಸವಲತ್ತುಗಳ ಸದುಪಯೋಗ ಪಡೆದು ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಮುಕ್ತವಾಗಿ ಬೆರೆಯಬೇಕು ಎಂದು ಸಲಹೆ ನೀಡಿದರು.

ಈ ದಿಸೆಯಲ್ಲಿ ಪೂಜ್ಯ ಹೆಗ್ಗಡೆಯವರ ನೆರವು ಮತ್ತು ಪ್ರೋತ್ಸಾಹವನ್ನು ಧನ್ಯತೆಯಿಂದ ಸ್ಮರಿಸಿದರು.ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಮೋಹನ ಸ್ವಾಗತಿಸಿದರು.ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ನ ವಜ್ರನಾಭಯ್ಯ ಧನ್ಯವಾದವಿತ್ತರು.

Exit mobile version