Site icon Suddi Belthangady

ಉಜಿರೆ ಶ್ರೀ ಧ.ಮಂ.ಸೆಕೆಂಡರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ- ಸ್ವಾಮಿ ವಿವೇಕಾನಂದರ ಸಂದೇಶ ರಾಷ್ಟ್ರ ನಿರ್ಮಾಣದ ಮತ್ತು ವಿಶ್ವ ಮಾನವ ಸಂದೇಶ: ಸಂಪತ್ ಕುಮಾರ್ ಕೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಂದ ಜನವರಿ 12 ರಂದು ಆಯೋಜಿಸಲ್ಪಟ್ಟ ಸ್ವಾಮಿ ವಿವೇಕಾನಂದರ 161ನೇ ಜಯಂತಿಯ ಹಿನ್ನಲೆಯಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ “ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ “ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಉಜಿರೆಯ ಉಪನ್ಯಾಸಕ ಸಂಪತ್ ಕುಮಾರ್ ಕೆ. ಅವರು ಸ್ವಾಮಿ ವಿವೇಕಾನಂದರ ಬಾಲ್ಯ ಹಾಗೂ ಜೀವನದ ಕುರಿತು ಮಾತನಾಡುತ್ತಾ ‘ನೀವು ಏನಾಗಲೆಂದು ಭಾವಿಸುತ್ತೀರಿ ನೀವು ಅದೇ ಆಗುತ್ತೀರಿ.ದುರ್ಬಲರು ಎಂದು ಭಾವಿಸಿದರೆ ದುರ್ಬಲರು ಬಲಶಾಲಿ ಎಂದು ಭಾವಿಸಿದರೆ ಬಲಶಾಲಿ’.ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಹಾಗೂ ತತ್ವಗಳಿಂದ ಕಲಿಯಬೇಕಾದದ್ದು ಬಹಳಷ್ಟಿವೆ ಅವರ ಸಂದೇಶ ರಾಷ್ಟ್ರ ನಿರ್ಮಾಣದ ಮತ್ತು ವಿಶ್ವ ಮಾನವ ಸಂದೇಶ. ಸ್ವಾಮಿ ವಿವೇಕಾನಂದರು ಜೀವಿಸಿದ್ದು 39 ವರ್ಷಗಳಾದರೂ ಅವರ ಮಾಡಿರುವ ಸೇವೆ, ನೀಡಿರುವ ಕೊಡುಗೆ, ಸ್ಪೂರ್ತಿ ಹಾಗೂ ಆದರ್ಶಗಳು ಅಪಾರ.” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಅವರು ಮಾತನಾಡುತ್ತಾ ‘ಭಾರತ ಯುವಕರ ರಾಷ್ಟ್ರ ಯುವಕರ ಉತ್ಸಾಹ ಚಿಂತನೆಗಳೇ ಈ ದೇಶದ ಶಕ್ತಿ ಇದರಿಂದ ದೇಶದ ಭವಿಷ್ಯವನ್ನೆ ಬದಲಾಯಿಸಬಹುದು’ ಎನ್ನುವುದು ಸ್ವಾಮೀಜಿಯವರ ಅಭಿಪ್ರಾಯ ಎಂದು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ, ಉಜಿರೆಯ ಮುಖ್ಯ ಶಿಕ್ಷಕ ಸುರೇಶ್.ಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿಗಳಾದ ಪ್ರೊ.ದೀಪಾ ಆರ್.ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸ್ವಯಂಸೇವಕರು ಹಾಗೂ ಸೆಕೆಂಡರಿ ಶಾಲೆಯ ಮಕ್ಕಳು ಕಾರ್ಯಕ್ರಮದ ಪ್ರಯೋಜನ ಪಡೆದರು.ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಸ್ವಾಗತಿಸಿದರು.ಸ್ವಯಂಸೇವಕಿಯರಾದ ವೀಕ್ಷಾ ವಂದಿಸಿ, ನಿತನ್ಯ ನಿರೂಪಿಸಿದರು.

Exit mobile version