Site icon Suddi Belthangady

ಕಡವೆ ಬೇಟೆಯಾಡಿದ ನೆರಿಯದ ಅಶೋಕ್ ಕುಮಾರ್ ಬಂಧನ

ಬೆಳ್ತಂಗಡಿ: ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿದ ಆರೋಪದಲ್ಲಿ ನೆರಿಯ ಗ್ರಾಮದ ಕುಲೆನಾಡಿ ನಿವಾಸಿ ಅಶೋಕ್ ಕುಮಾರ್ ಎಂಬಾತನನ್ನು ಅರಣ್ಯ ಇಲಾಖೆಯವರು ಬಂಧಿಸಿ ಮಾಂಸ ಹಾಗೂ ಬೇಟೆಗೆ ಬಳಿಸಿದ ಒಂದು ಸಿಂಗಲ್ ಬ್ಯಾರಲ್ ಕೋವಿ, ತೋಟೆ ಹಾಗೂ 5 ಕೆ.ಜಿ. ಮಾಂಸ ವಶಪಡಿಸಿಕೊಂಡಿದ್ದಾರೆ.ಬಂಧಿತ ಅಶೋಕ್ ಕುಮಾರ್‌ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

ಕಡವೆ ಬೇಟೆ: ನೆರಿಯ ಕುಲೆನಾಡಿಯ ಅಶೋಕ್ ಕುಮಾರ್ ತನ್ನ ಮನೆಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯ ಪ್ರದೇಶದ ಪೆರ್ನಾಳೆ ಕೆರೆಯಿಂದ ಒಂದಿಷ್ಟು ದೂರದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಚರ್ಮ, ತಲೆ ಹಾಗೂ ಕಾಲಿನ ಭಾಗಗಳು ಮತ್ತು ಇನ್ನಿತರ ಅವಯವಗಳು ಪತ್ತೆಯಾಗಿದೆ. ಇನ್ನೋರ್ವ ಆರೋಪಿ ಬಾಂದಡ್ಕ ಶೇಷಪ್ಪ ಗೌಡ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಯತಿಂದ್ರ ಕುಮಾರ್, ಪಾಂಡುರಂಗ ಕಮತಿ, ಹರಿಪ್ರಸಾದ್, ರಾಜಶೇಖರ್ ಎಸ್, ಭವಾನಿಶಂಕರ್. ರಾಜೇಶ್ ಎಸ್. ರವೀಂದ್ರ ಕೆ. ಪೂಜಾ, ಗಸ್ತು ಅರಣ್ಯ ಪಾಲಕರಾದ ರವಿಪಜಟ್ಟಿ ಮುಕ್ರಿ, ಪರಮೇಶ್ವರ್, ಅರಣ್ಯ ವೀಕ್ಷಕರಾದ ಬಾಲಕೃಷ್ಣ ಮತ್ತು ಗಫೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗೆ ಜಾಮೀನು ಮಂಜೂರು: ಬಂಧಿತ ಆರೋಪಿ ಅಶೋಕ್ ಕುಮಾರ್‌ಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಸಂತೋಷ್ ಕುಮಾರ್ ಲಾಲ ವಾದಿಸಿದ್ದರು.

Exit mobile version