Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನ ಸಹಭಾಗಿತ್ವದಲ್ಲಿ 8ನೇ ವರ್ಷದ- ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ 16,529 ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಧರ್ಮಸ್ಥಳ: ಧಾರ್ಮಿಕ ಶ್ರದ್ಧಾಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗವಾಗಿದ್ದು.ಇವುಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಪರಿಸರ ಸ್ವಚ್ಛತಾ ಮನೋಭಾವವು ಸಾರ್ವತ್ರಿಕವಾಗಿರುತ್ತದೆ ಎಂಬ ಶ್ರೀ ಕ್ಷೇತ್ರ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ಹೆಗ್ಗಡೆಯವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ.

ವರ್ಷದಲ್ಲಿ 2 ಬಾರಿ ಅಂದರೆ ದೇಶದ ಸ್ವಾತಂತ್ರ್ಯೋತ್ಸವ ಮತ್ತು ಮಕರ ಸಂಕ್ರಾಂತಿ ಸಂದರ್ಭ ಸಪ್ತಾಹದ ಮೂಲಕ ಸ್ವಯಂ ಸೇವಕರು ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುತ್ತಾರೆ.

ಕಳೆದ 8 ವರ್ಷಗಳಿಂದ ನಿರಂತರವಾಗಿ ಸ್ವಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಮಕರ ಸಂಕ್ರಾತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಜನವರಿ 14ರ ಮೊದಲು ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳು ಸ್ವಚ್ಛ ಹಾಗೂ ಪಾವಿತ್ರ್ಯತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಜನವರಿ 7ರಿಂದ 13ರವರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ನಡೆಸಲಾಗುತ್ತಿದೆ.

ರಾಜ್ಯದಾದ್ಯಂತ 16,529 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು ಸುಮಾರು 4,13,010 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮ ಪಂಚಾಯತ್‌ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.

ನಡೆಯುವ ಸ್ವಚ್ಛತಾ ಕಾರ್ಯಕ್ರಮಗಳ ವಿವರ:

*ದೇವಸ್ಥಾನದ ಸುತ್ತಮುತ್ತಲಿನ ಗಿಡ ಘಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವುದು.
*ಮಂದಿರ, ಮಸೀದಿ, ಚರ್ಚ್‌ಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
*ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವಥ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸುವುದು.
*ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ನಾನಕಟ್ಟೆ, ನದಿ ತೀರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪ್ಲಾಸ್ಟಿಕ್, ಬಟ್ಟೆಬರೆ ಕಸಗಳನ್ನು ನದಿಗೆ ಎಸೆಯದಂತೆ ಅರಿವು ಮೂಡಿಸಲಾಗುವುದು. *ಶ್ರದ್ಧಾ ಕೇಂದ್ರದ ಪರಿಕರಗಳನ್ನು ಸ್ವಚ್ಛಗೊಳಿಸುವುದು.
*ಸಾರ್ವಜನಿಕ ಶೌಚಾಲಯ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗುವುದು.
*ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವುದು.
*ಜಾತ್ರೆ, ವಿಶೇಷ ಕಾರ್‍ಯಕ್ರಮದ ದಿನ ಸ್ವಚ್ಛತೆಗಾಗಿ ವಿಶೇಷ ಸ್ವಚ್ಛತಾ ತಂಡ ರಚಿಸುವಂತೆ ಮಾಡುವುದು.
*ಸ್ವಚ್ಛತೆಯ ಬಗ್ಗೆ ನಿಗಾ ವಹಿಸುವ ಆಸಕ್ತ ಸ್ವಯಂಸೇವಕರ ಕಾವಲು ಸಮಿತಿ ರಚನೆ ಮಾಡುವುದು.
*ತ್ಯಾಜ್ಯಗಳನ್ನು ಬಿಸಾಡಲು ಬಿದಿರಿನ ಬುಟ್ಟಿ, ಡಸ್ಟ್‌ಬಿನ್, ತಗಡಿನ ಡಬ್ಬ ಇತ್ಯಾದಿಗಳನ್ನು ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಹಾಕುವುದು.

ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಶ್ರದ್ಧಾಕೇಂದ್ರಗಳ ಶುಚಿತ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುವುದು.

Exit mobile version