ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ 21 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಗುಲಾಬಿ ಅವರನ್ನು ಡಿ.30ರಂದು ಕಾಲೇಜಿನಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಕಾಲೇಜಿನ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಸ್ವಚ್ಛತಾ ಸಿಬ್ಬಂದಿಯ ಶ್ರಮ ಸ್ಮರಣೀಯ ಎಂದರು.
“ಗುಲಾಬಿ ಅವರ ಸುದೀರ್ಘ ವರ್ಷಗಳ ಪ್ರಾಮಾಣಿಕ ಸೇವೆ ಮತ್ತು ಸರಳ ಜೀವನ ಮಾದರಿಯಾಗಿದೆ.ಕಾಲೇಜು ಸದಾ ಅವರ ಹಿತವನ್ನು ಬಯಸುತ್ತದೆ” ಎಂದು ಅವರು ತಿಳಿಸಿದರು.ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., “ಸ್ವಚ್ಛತಾ ಸೇನಾನಿಯಾಗಿ ಗುಲಾಬಿ ಅವರು ಸಂಸ್ಥೆಗೆ ಶ್ರದ್ಧೆಯಿಂದ ನೀಡಿದ ಸೇವೆ ನಿಜಕ್ಕೂ ಹೆಮ್ಮೆ ತರುವಂಥದ್ದು. ಅವರ ನಿವೃತ್ತ ಜೀವನ ಸುಖವಾಗಿರಲಿ” ಎಂದು ಶುಭ ಹಾರೈಸಿದರು.
ಉಪ ಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್ ಹಾಗೂ ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ ಮಾತನಾಡಿ, ಸನ್ಮಾನಿತರಿಗೆ ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಲಾಬಿ ಅವರು, “ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ನನಗೆ ಎಸ್.ಡಿ.ಎಂ ಕಾಲೇಜು ಖಾಯಂ ಉದ್ಯೋಗ ನೀಡುವ ಮೂಲಕ ಬದುಕಿಗೆ ಆಧಾರವಾಗಿತ್ತು. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಮಾಡಿದ ತೃಪ್ತಿ ನನಗಿದೆ” ಎಂದು ಭಾವುಕರಾದರು.
ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ವತಿಯಿಂದ ಗುಲಾಬಿ ಅವರಿಗೆ ಇನ್ವರ್ಟರ್ ಕೊಡುಗೆ ನೀಡಲಾಯಿತು.ಕಲಾ ನಿಕಾಯದ ಡೀನ್ ಡಾ.ಶ್ರೀಧರ್ ಭಟ್, ವಾಣಿಜ್ಯ ನಿಕಾಯದ ಡೀನ್ ಶಕುಂತಲಾ, ಲೆಕ್ಕಪತ್ರ ನಿರ್ವಹಣೆ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್, ಆಡಳಿತ ವಿಭಾಗದ ಮುಖ್ಯಸ್ಥ ರಾಜಪ್ಪ ಕೆ.ಎಸ್. ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.