Site icon Suddi Belthangady

ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಸಾಂಸ್ಕೃತಿಕ ವೈಭವ

ಸುಲ್ಕೇರಿ: ಮುಂದಿನ ಪೀಳಿಗೆಯು ಸಂಸ್ಕಾರವಂತರಾಗಿ ಮೌಲ್ಯಯುತ ಜೀವನ ನಡೆಸಬೇಕು ಎಂಬ ಉದ್ದೇಶಕ್ಕಾಗಿ ಶ್ರೀರಾಮ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾll ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಜ.2ರಂದು ಸುಲ್ಕೇರಿಯ ಶ್ರೀರಾಮ ಶಿಶು ಮಂದಿರ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತೀಯ ಧರ್ಮ, ಸಂಸ್ಕೃತಿಯೇ ಜಗತ್ತನ್ನು ಆಳುವ ಕಾಲ ಬರಲಿದೆ.ರಾಮ ರಾಜ್ಯ ಜಗತ್ತಿನೆಲ್ಲೆಡೆ ಸ್ಥಾಪನೆಯಾಗಬೇಕು ಎಂಬ ಆಶಯ ವಿದೇಶಿಯರಲ್ಲಿಯೂ ಇದೆ.ಹೀಗಾಗಿ ನಾವು ಪಾಶ್ಚಿಮದ ನಾಗರಿಕತೆಗೆ ಮಾರುಹೋಗದೆ ನಮ್ಮದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.ಇದಕ್ಕಾಗಿ ಇಂತಹ ಶಾಲೆಗಳ ಅಗತ್ಯ ಇದ್ದು ಹಿಂದೂ ಸಮಾಜ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕಾರ್ಕಳದ ಸಿ.ಎ.ಕಮಲಾಕ್ಷ ಕಾಮತ್, ಬೆಳ್ತಂಗಡಿಯ ದಂತ ವೈದ್ಯ ಶಶಿಧರ ಡೋಂಗ್ರೆ, ಶಿರ್ತಾಡಿಯ ವೈದ್ಯ ಆಶೀರ್ವಾದ ಎಂ.ಪಿ., ಶಾಲಾ ಉನ್ನತಿಗೆ ಸಹಕಾರ ನೀಡಿದ ದಾನಿ ಸಂಸ್ಥೆಗಳಾದ ಬೆಂಗಳೂರಿನ ಅಪೋಟೆಕ್ಸ್ ರಿಸರ್ಚ್ ಪ್ರೈ.ಲಿ. ಆಡಳಿತಾಧಿಕಾರಿ ಜೋಸ್ ಝೇವಿಯರ್, ಪ್ರಧಾನ ಪ್ರಬಂಧಕ ದೇವರಾಜ್, ಮಾನವ ಚಾರಿಟೀಸ್‌ನ ಗೌರವ ಕಾರ್ಯದರ್ಶಿ ರಾಜೇಂದ್ರ ಕುಲಕರ್ಣಿ, ಫೆಡರಲ್ ಮುಘಲ್ ಇಂಡಿಯಾ ಲಿ.ನ ಮುಖ್ಯ ಮಾನವ ಸಂಪನ್ಮೂಲಾಧಿಕಾರಿ ಪ್ರಕಾಶ್ ಎ.ಎಸ್., ಯೋಜನಾ ಪ್ರಬಂಧಕ ದಲ್ಜಿತ್ ಸಿಂಗ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಕಲ್ಲಡ್ಕ ಭಟ್ ಅವರಿಗೆ ಆಂಜನೇಯನ ಚಿತ್ರವಿರುವ ಭಗವಾಧ್ವಜವನ್ನು ನೀಡಿ ಗೌರವಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು.ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಪ್ರಸ್ತಾವಿಸಿದರು.ಸದಸ್ಯ ಭಾಸ್ಕರ ಸಾಲಿಯಾನ್ ವಂದಿಸಿದರು.ಉಪಾಧ್ಯಕ್ಷ ಚಂದ್ರಕಾಂತ ಗೋರೆ ನಿರ್ವಹಿಸಿದರು. ಬಳಿಕ ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ, ವಿಶಿಷ್ಟ ಕಲಾ ಪ್ರದರ್ಶನಗಳನ್ನು ಪ್ರಸ್ತುತಪಡಿಸಿದರು.

Exit mobile version